Wednesday, November 2, 2022

ಶೀಘ್ರ ಮನೆ ಮನೆಗೆ ಸಮಪ೯ಕ ಕುಡಿಯುವ ನೀರಿನ ಸೌಲಭ್ಶ: ಶಾಸಕ ಭೂಸನೂರ

 



ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು.ಸಂತೋಷಗೌಡ ಪಾಟೀಲ,ಸಿದ್ದು ಬುಳ್ಳಾ ಇತರರಿದ್ದರು.


ಈ ದಿವಸ ವಾರ್ತೆ

ಬ್ರಹ್ಮದೇವನಮಡು : ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರಿನ ಪೂರೈಸುವ ಮಹತ್ತರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು,ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಮೇಶ ಭೂಸನೂರ ಹೇಳಿದರು.

  ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ 66.42 ಲಕ್ಷ ರೂ.ವೆಚ್ಚದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆ ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು.2021-22ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪಕ೯ ಯೋಜನೆ ಪೂಣ೯ಗೊಂಡರೆ ನೀರಿನ ಸಮಸ್ಶೆ ದೂರವಾಗಲಿದೆ ಎಂದರು.ಈ ವೇಳೆ ಚನ್ನಮಲ್ಲಯ್ಶ ಹಿರೇಮಠ, ಪ್ರಮುಖರಾದ ಸಂತೋಷಗೌಡ ಪಾಟೀಲ ಡಂಬಳ,ಸಿದ್ದು ಬುಳ್ಳಾ,ದೇವಿಂದ್ರ ತೋನಶ್ಶಾಳ,ಸಿದ್ದಪ್ಪ ಮನಗೂಳಿ,ನಾಗಣ್ಣ ಪಡೇಕನೂರ,ದೇವಿಂದ್ರ ಮನಗೂಳಿ,ಗುರುಸಿದ್ದಪ್ಪ ಮನಗೂಳಿ,ಪತ್ರಕತ೯ ಮಲ್ಲು ಕೆಂಭಾವಿ,ನಾನಾಗೌಡ ಪಾಟೀಲ, ಡಾ.ಎನ್.ಪಿ.ನಾಯ್ಕೋಡಿ,ಸಂತೋಷ ಕರಿಕಲ್ಲ್,ಶರಣು ಮನಗೂಳಿ,ನಡಗೇರೆಪ್ಪ ತಳವಾರ,ಕೆ.ಡಿ.ಸೀತನೂರ,ನಾಗಪ್ಪ ಪೂಜಾರಿ,ಇಪಾ೯ನ ಚಂಡ್ರಕಿ,ಪ್ರವೀಣ ರಾಠೋಡ,ದೇವಿಂದ್ರ ರತ್ಶಾಳ ಸೇರಿದಂತೆ ಇತರರಿದ್ದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾಗಿ ಲೇಖಕಿ ಹೇಮಾ ವಸ್ತ್ರದ ಆಯ್ಕೆ

ಹೇಮಾ ವಸ್ತ್ರದ

ಲೇಖಕಿ ಹೇಮಾ ವಸ್ತ್ರದ

 ಈ ದಿವಸ ವಾರ್ತೆ

ವಿಜಯಪುರ: ಕರ್ನಾಟಕ ಲೇಖಕಿಯರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಲೇಖಕಿ ಹೇಮಾ ವಸ್ತ್ರದ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ರಚನೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಹೇಮಾ ವಸ್ತ್ರದ, ಉಪಾಧ್ಯಕ್ಷರಾಗಿ ವನಮಾಲಾ ರಾಠೋಡ, ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ, ಖಜಾಂಚಿಯಾಗಿ ದಾಕ್ಷಾಯಣಿ ಬಿರಾದಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಲೇಖಕಿ ಡಾ. ಎಚ್ ಎಲ್ ಪುಷ್ಪಾ ಅವರು ಇದಕ್ಕೆ ಅನುಮೋದಿಸಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಭಾವತಿ ದೇಸಾಯಿ, ಭಾರತಿ ಪಾಟೀಲ, ಇಂದುಮತಿ ಲಮಾಣಿ, ಕೆ ಸುನಂದಾ, ಶೋಭಾ ಗುನ್ನಾಪುರ ಇತ್ಯಾದಿ ಹಿರಿಯ ಲೇಖಕಿಯರಾದಿಯಾಗಿ ಕಲೇಸಂ ನ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

03-11-2022 EE DIVASA KANNADA DAILY NEWS PAPER

ನಂ. 6 ರಂದು ಪ್ರಶಸ್ತಿ ಪ್ರದಾನ ಹಾಗೂ ಊರ್ಧ್ವ ರೇತ ಕಿರುಚಿತ್ರ ಬಿಡುಗಡೆ

ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ
ಡಾ. ವೀರಣ್ಣ ದಂಡೆ 

ಡಾ. ಚನ್ನಪ್ಪ ಕಟ್ಟಿ
ಡಾ. ಚನ್ನಪ್ಪ ಕಟ್ಟಿ


ಈ ದಿವಸ ವಾರ್ತೆ ವಿಜಯಪುರ:

ನೆಲೆ ಪ್ರಕಾಶನ ಸಂಸ್ಥೆ, ಸಿಂದಗಿ (ರಿ) ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ ಅವರಿಗೆ 2022 ನೇ ಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನೆಲೆ ಸಿನಿ ಕ್ರಿಯೇಷನ್  ಅರ್ಪಿಸುವ 'ಊರ್ಧ್ವ ರೇತ' ಕಿರುಚಿತ್ರ ಬಿಡುಗಡೆ ಸಮಾರಂಭವು ನವೆಂಬರ್ 6 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಮಾಂಗಲ್ಯ ಭವನ ವಿಜಯಪುರ ರಸ್ತೆ ಸಿಂದಗಿಯಲ್ಲಿ ಜರುಗಲಿದೆ.



ಸಾನ್ನಿಧ್ಯ ಹಾಗೂ ಕಿರುಚಿತ್ರ ಬಿಡುಗಡೆಯನ್ನು ಸಾರಂಗಮಠದ ಪರಮಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ನೆರವೇರಿಸಲಿದ್ದಾರೆ.

ಬಿ.ಎಲ್.ಡಿ. ಇ. ಸಂಸ್ಥೆ ಯ ನಿರ್ದೇಶಕರಾದ ಅಶೋಕ ವಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವೀರಣ್ಣ ದಂಡೆ ಬದುಕು - ಬರಹ ಕೃತಿ ಬಿಡುಗಡೆ ಯನ್ನು  ಅಸ್ಕಿಯ ಪ್ರಗತಿಪರ ರೈತರಾದ  ಎಸ್.ಎಸ್.ಪಾಟೀಲ ಅವರ ನೆರವೇರಿಸಲಿದ್ದಾರೆ.

ಪತ್ರಕರ್ತರಾದ ಡಾ. ಶಿವರಂಜನ ಸಂತ್ಯಪೇಟೆ ಅವರು ಮಾತನಾಡಲಿದ್ದಾರೆ. ಕಾರ್ಯದರ್ಶಿ ಡಾ.ಎಂ.ಎಸ್. ಮದಭಾವಿ ಅಭಿನಂದನ ನುಡಿ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ  ಹಿರಿಯ ಜಾನಪದ ವಿದ್ವಾಂಸರಾದ ಡಾ. ವೀರಣ್ಣ ದಂಡೆ, ಮುಖ್ಯ ಅತಿಥಿಗಳಾಗಿ ವಿಜಯಪುರ ಹಿರಿಯ ಚಿಂತಕರು ಡಾ. ಆರ್. ಕೆ. ಕುಲಕರ್ಣಿ, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಂ.ಬಿರಾದಾರ, ಚಲನಚಿತ್ರ ನಿರ್ದೇಶಕರಾದ ಸುನೀಲಕುಮಾರ ಸುಧಾಕರ ಅವರು ಭಾಗವಹಿಸಲಿದ್ದಾರೆ ಎಂದು ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ನೆಲೆ ಪ್ರಕಾಶನ ಸಂಸ್ಥೆಯ ಸಂಚಾಲಕರಾದ ಡಾ. ಚನ್ನಪ್ಪ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, October 29, 2022

ಅ.31ರಂದು ಮತ ಎಣಿಕೆಗೆ ಸಕಲ ಸಿದ್ಧತೆ : 7 ಕೊಠಡಿ-35 ಟೇಬಲ್‍ಗಳ ವ್ಯವಸ್ಥೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ


ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಅಕ್ಟೋಬರ್ 31ರಂದು ನಗರದ ವಿ.ಬಿ.ದರಬಾರ  ಹೈಸ್ಕೂಲ್‍ನಲ್ಲಿ ನಡೆಯಲಿದ್ದು,  ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಅಕ್ಟೋಬರ್ 31ರಂದು ಬೆಳಿಗ್ಗೆ 7-30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಆಯಾ ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಯವರೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ತದನಂತರ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿರುವ ಮತಗಳ ಎಣಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ ಎಣಿಕೆ ಕಾರ್ಯವು ಒಟ್ಟು 7 ಕೊಠಡಿಗಳಲ್ಲಿ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ ಒಟ್ಟು 5 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, 35 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವಾರ್ಡಗೆ ಒಂದು ಟೇಬಲ್ ವ್ಯವಸ್ಥೆ ಮಾಡಿದ್ದು, ಎಲ್ಲ ವಾರ್ಡಗಳ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಿಸಲಾಗುವುದು.

ಮತ ಎಣಿಕೆ ಸುತ್ತು: ವಾರ್ಡ ಸಂಖ್ಯೆ 15ರ  ಒಂದು ವಾರ್ಡಗೆ 03 ಸುತ್ತುಗಳು, ವಾರ್ಡ ಸಂ.26ರ ಒಂದು ವಾರ್ಡಗೆ 05 ಸುತ್ತುಗಳು,  ವಾರ್ಡ ಸಂ.4,5,6,9 ಹಾಗೂ 17ರ ಐದು ವಾರ್ಡಗಳಿಗೆ  06 ಸುತ್ತುಗಳು,  ವಾರ್ಡ ಸಂ.10, 25, 27, 33, 34 ಹಾಗೂ 35ರ ಆರು ವಾರ್ಡಗಳಿಗೆ 07 ಸುತ್ತುಗಳು, ವಾರ್ಡ ಸಂ.01, 12, 24, 32ರ ನಾಲ್ಕು ವಾರ್ಡಗಳಿಗೆ  08 ಸುತ್ತುಗಳು, ವಾರ್ಡ ಸಂ.19, 28, 30 ಹಾಗೂ 31 ರ ನಾಲ್ಕು ವಾರ್ಡಗಳಿಗೆ  09 ಸುತ್ತುಗಳು, ವಾರ್ಡ ಸಂ.02, 03, 13, 16, 23 ಹಾಗೂ 29ರ ಆರು ವಾರ್ಡಗಳಿಗೆ 10 ಸುತ್ತುಗಳು, ವಾರ್ಡ ಸಂ.14 ಹಾಗೂ 20ರ ಎರಡು ವಾರ್ಡಗಳಿಗೆ 11 ಸುತ್ತುಗಳು, ವಾರ್ಡ ಸಂ. 7,8,11,18 ಹಾಗೂ 22ರ ಐದು ವಾರ್ಡಗಳಿಗೆ 12 ಸುತ್ತುಗಳು  ಹಾಗೂ ವಾರ್ಡ ಸಂಖ್ಯೆ. 21ರ ಒಂದು ವಾರ್ಡಿಗೆ 13 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆಗೆ 179

 ಅಧಿಕಾರಿ-ಸಿಬ್ಬಂದಿ: ಮಹಾನಗರ ಪಾಲಿಕೆಯ 35 ವಾರ್ಡಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 07 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 07 ಕಂಪ್ಯೂಟರ್ ಆಪರೇಟರ್, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿಗಳು ಹಾಗೂ ಇತರೆ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ.

ಪೊಲೀಸ್ ಬಂದೋಬಸ್ತ್:  ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 3 ಡಿವೈಎಸ್‍ಪಿ, 8 ಸಿಪಿಐ, 32 ಪಿಎಸ್‍ಐ, 35 ಎಎಸ್‍ಐ, 76 ಹೆಡ್ ಕಾನ್ಸಟೇಬಲ್, 128 ಪೊಲೀಸ್ ಕಾನ್ಸಟೇಬಲ್, 17 ಮಹಿಳಾ ಪೊಲೀಸ್ ಕಾನ್ಸಟೇಬಲ್, 04 ಐ.ಆರ್.ಬಿ. ಹಾಗೂ 06 ಡಿಎಆರ್ ತುಕಡಿಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರ ಪ್ರವೇಶ :  ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Friday, October 28, 2022

ಗೋಳಗುಮ್ಮಟದ ಆವರಣದಲ್ಲಿ ಕನ್ನಡಾಭಿಮಾನದ ಪ್ರತಿಧ್ವನಿ

ಈ‌ ದಿವಸ ವಾರ್ತೆ

ವಿಜಯಪುರ  : ಕನ್ನಡ ನಾಡು, ನುಡಿ ಶ್ರೀಮಂತಿಕೆ ಸಾರುವ ಗೀತೆಗಳು ಗೋಳಗುಮ್ಮಟದ ಆವರಣಲ್ಲಿ ಮೊಳಗಿ ಕನ್ನಡಾಭಿಮಾನ ಅನಾವರಣಗೊಳಿಸಿದವು.

ಜಿಲ್ಲಾಡಳಿತ, ಜಿಲ್ಲಾ  ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ  'ಕೋಟಿ ಕಂಠ ಗಾಯನ'  'ನನ್ನ ನಾಡು- ನನ್ನ ಹಾಡು' ಯಶಸ್ವಿಯಾಗಿ ನಡೆಯಿತು. 

ಜಿಲ್ಲಾಧಿಕಾರಿ ಸೇರಿದಂತೆ, ವೇದಿಕೆಯ ಅತಿಥಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ನಗರದ ಸಾರ್ವಜನಿಕರು ಕರುನಾಡಿನ ಶ್ರೀಮಂತಿಕೆ ಸಾರುವ ಗೀತೆಗಳನ್ನು ಹಾಡುವ ಮೂಲಕ ಅಭಿಮಾನ ಪ್ರದರ್ಶಿಸಿದರು.

 ನಾಡಗೀತೆ ಜಯಭಾರತ ಜನನೀಯ ತನುಜಾತೆ, ಡಿ.ಎಸ್. ಕರ್ಕಿ ವಿರಚಿತ ಹಚ್ಚೇವು ಕನ್ನಡದ ದೀಪ, ಹುಯಿಲಗೋಳ  ನಾರಾಯಣರಾವ್ ವಿರಚಿತ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಕುವೆಂಪು ವಿರಚಿತ `ಬಾರಿಸು ಕನ್ನಡ ಡಿಂಡಿಮವ....', ಚೆನ್ನವೀರ ಕಣವಿ ವಿರಚಿತ 'ವಿಶ್ವ ವಿನೂತನ ವಿದ್ಯಾ ಚೇತನ' ಹಂಸಲೇಖ ವಿರಚಿತ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳು ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಮೊಳಗಿದವು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ನಾಡಗೀತೆಯನ್ನು ಹುಯಿಲಗೋಳ ನಾರಾಯಣರಾವ್ ಅವರು ಕರ್ನಾಟಕದ ಏಕೀಕರಣ ಚಳುವಳಿ ಸಂದರ್ಭದಲ್ಲಿ ಈ ಗೀತೆ ಕನ್ನಡ,ನಾಡು-ನುಡಿ ಸಂಸ್ಕೃತಿ, ಭಾಷೆಯ ಐಕ್ಯತೆ ಆಶಯಕ್ಕೆ ಹೊಸ ಹುಮ್ಮಸ್ಸು ಮೂಡಿಸಿತ್ತು.  

 ನವಂಬರ್ ತಿಂಗಳಲ್ಲಿ ಎಲ್ಲಾ ಜನರ ಮನೆ- ಮನಗಳಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣದ ಕಳೆಗಟ್ಟುತ್ತದೆ ಎಂದರು.

 ಕನ್ನಡವು ಸಂಪದ್ಭರಿತ ಭಾಷೆಯಾಗಿದೆ ಅಂತೆಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅಷ್ಟೆ ಅಲ್ಲದೆ, ಈ ಸಮೃದ್ಧ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಸಂದಿದೆ ಎಂದರು.



ಸಾಹಿತ್ಯ ಸಮೃದ್ಧಿಯ ಚೆಲುವ ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಇದರ ಪ್ರಾಚೀನತೆಯನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ನಾವು ಗುರುತಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ದಾಸ ಪರಂಪರೆ, ಭಕ್ತಿ ಪರಂಪರೆ ಮತ್ತು ವಚನ ಸಾಹಿತ್ಯವು ಕನ್ನಡವನ್ನು ಶ್ರೀಮಂತಗೊಳಿಸಿದೆ. ದಾಸವರೇಣ್ಯರು, 12ನೇ ಶತಮಾನದ ಶರಣರು ಸಾಹಿತ್ಯ ಕ್ರಾಂತಿಯನ್ನು ಮಾಡುವ ಮೂಲಕ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು. 

ಇಂತಹ ಶ್ರೀಮಂತ ಸಂಸ್ಕೃತಿಯುಳ್ಳ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಾಡಿನ ಸಾಹಿತಿಗಳು, ಕವಿಗಳು ತಮ್ಮ ಬರಹ, ಸಾಹಿತ್ಯದ ಮೂಲಕ ಕವನಗಳ ಮೂಲಕ ನಾಡಿನ  ವರ್ಣನೆಯನ್ನ ಬಹು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿ ಪರಂಪರೆಯು ಸಾಹಿತ್ಯದ ಮೂಲಕ ಹೆಚ್ಚಳವಾಗಿದೆ ಎಂದರು.

ಕನ್ನಡ ನಾಡು ಪವಿತ್ರ ಭಾವವಿದ್ದಂತೆ,

ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಮೊದಲಾದ್ಯತೆ ಕನ್ನಡವೇ ಆಗಿದೆ. ವಿಶೇಷವಾಗಿ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ಕೊಡುತ್ತಿದೆ. ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಕನ್ನಡ ನಾಡಿನ ಸಂಸ್ಕೃತಿ ಭಾಷೆ ಸಿರಿಯನ್ನು ಹೆಚ್ಚಿಸಿ ಅದು ಪಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಈ ದಿಸೆಯಲ್ಲಿ ಹಮ್ಮಿಕೊಂಡು ಆಚರಿಸಲಾಗುತ್ತಿದೆ ಎಂದರು.

ನಾಡು ನುಡಿ, ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಮೂಡಿಸುವ ಗೀತೆಗಳನ್ನು ನಮ್ಮ ನಾಡಿನ ಕವಿಗಳ ರಚಿಸಿದ್ದಾರೆ. ಇವುಗಳನ್ನು ಕೇಳುವ ಹಾಗೂ ಹಾಡುವ ಮೂಲಕ ನಮ್ಮ ಅಭಿಮಾನ ಹೆಚ್ಚಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜೆ. ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಜಿಲ್ಲೆಯ ಅಧಿಕಾರಿಗಳು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.