ವಿಜಯಪುರ : ಹೈದ್ರಾಬಾದ್ ವಿಮೋಚನಾ ಚಳುವಳಿ ಪಿತಾಮಹ ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್ 3 ರಂದು ರಾಜ್ಯಾಧ್ಯಂತ ಎಲ್ಲ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ಸರಕಾರದಿಂದ ಜಯಂತಿ ಆಚರಣೆ ಮಾಡಲು ಆಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರ ಮೂಲಕ ಸರ್ಕಾರಕ್ಕೆ ವಿಜಯಪುರ ಜಿಲ್ಲಾ ಸಂಘ -ಸಂಸ್ಥೆಗಳ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ 371ಜೆ ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ಅಖಂಡ ಹೈದ್ರಾಬಾದ್ ಪ್ರಾಂತವು ಭಾರತದ ಒಕ್ಕೂಟದಲ್ಲಿ ಇಂದು ಸೇರಿದೆ ಅಂದರೆ ಅದಕ್ಕೆ ಸ್ವಾಮಿ ರಾಮಾನಂದ ತೀರ್ಥರವರೇ ಕಾರಣಿಪುರಷರಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿ ಹೈದ್ರಾಬಾದ್ ವಿಮೋಚನಾ ಚಳುವಳಿಯನ್ನು ಕಟ್ಟಿ ವಿಮೋಚನಾ ಚಳುವಳಿಯ ಪಿತಾಮಹರೆನಿಸಿದ್ದಾರೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಸ್ವಾಮಿ ರಾಮಾನಂದರ ತೀರ್ಥರ ಪಾತ್ರ ಬಹುದೊಡ್ಡದಾಗಿದೆ. ಅವರ ಆದರ್ಶ ಮತ್ತು ಜೀವನ ಮುಂದಿನ ಪೀಳಿಗೆಗೆ ಪರಿಚಯಮಾಡಿಕೊಡುವ ಉದ್ದೇಶದಿಂದ ಸರ್ಕಾರ ಅವರ ಜನ್ಮದಿನವನ್ನು ಜಯಂತಿಯಾಗಿ ಆಚರಿಸಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ಸಿಂದಗಿಯಲ್ಲಿರುವ ಅವರ ಜನ್ಮ ಸ್ಮಾರಕ ವೀರಸೌಧವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಮುಖಂಡರಾದ ವಿನೋದ ಖೇಡ, ಸಿದ್ದನಗೌಡ ಪಾಟೀಲ, ಎನ್. ಸುರೇಶಕುಮಾರ, ಅನಿಲ ಇಕ್ಕಡೆ, ಜಗದೇವ ಸೂರ್ಯವಂಶಿ, ಮಲ್ಲನಗೌಡ ಪಾಟೀಲ (ಬರಟಗಿ ), ಪ್ರದೀಪ ದೇಶಪಾಂಡೆ, ಕಲ್ಲಪ್ಪ ಶಿವಶರಣ, ಅಯೂಬಖಾನ ನದಾಫ್, ಮೊಹ್ಮದ್ ಬಾಗವಾನ, ಎಂ ಎಂ ಹಂಗರಗಿ, ಸಂಗನಗೌಡ ಪಾಟೀಲ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment