ಸುರಪುರ : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘ (ರಿ.), ಸುರುಪುರ, ಆದಿಕವಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ ಬಿ.ಎಡ್. ಕಾಲೇಜು, ರಂಗಂಪೇಟೆ ಹಾಗೂ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯ, ರಂಗಂಪೇಟೆ ಇವರ ಸಂಯುಕ್ತ ಆಶಯದಲ್ಲಿ 2026-27ನೇ ಸಾಲಿನ ಅಂತರ ಕಾಲೇಜು ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 29ರಂದು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೀಮಣ್ಣ ಬಿಲ್ಲವ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡಾ ಮನೋಭಾವದಿಂದ ನಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವದ ಗುಣ, ಆತ್ಮವಿಶ್ವಾಸ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆ ಹೆಚ್ಚುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ಕಬಡ್ಡಿ ಪಂದ್ಯಾವಳಿಯಲ್ಲಿ ಶಿಸ್ತಿನಿಂದ ಹಾಗೂ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕುಲಕರ್ಣಿ, ಅಂಬೇಡ್ಕರ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ನಾಗಣ್ಣ ಪೂಜಾರಿ, ಕರ್ನಾಟಕ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ರೇಣುಕಾ, ಪ್ರಿಯದರ್ಶನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಆದಿಲ್ ಶಾಹಿ, ಹುಣಸಗಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಭೀಮಣ್ಣ ಹಾಗೂ ಅರುಂಧತಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಲಕ್ಷ್ಮೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾಲೇಜಿನ ಸಿಬ್ಬಂದಿಗಳಾದ ಹಿರುಗರಾಜ, ಮರಿಯಪ್ಪ, ರಮೇಶ್, ನವೀನ್ ಕುಮಾರ್ ಹಾಗೂ ರೇಣುಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ.ಜಿ. ನಾಯಕ ನಿರೂಪಿಸಿದರು. ಹಿರುಗರಾಜ ಅವರು ವಂದನಾರ್ಪಣೆ ಸಲ್ಲಿಸಿದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿನಿಯರು ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
No comments:
Post a Comment