Tuesday, March 3, 2026

ಮಾ.9ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ ಸಾರ್ವಜನಿಕರು-ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಮನವಿ

ವಿಜಯಪುರ  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಾ.9ರಂದು ನಗರದಲ್ಲಿ ನಡೆಯಲಿರುವ ಭೀಮ ಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಲು ಅಧಿಕಾರಿಗಳು ಕೈಜೋಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭೀಮ ಗಾಯನ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಜೀವನ, ಸಾಧನೆ ಸಮಾನತೆಯ ಹೋರಾಟ, ಅಸ್ಪಶ್ಯತೆ ನಿವಾರಣೆ, ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ಅಂದು ನಡೆಯಲಿದೆ. ಸಮಾನತೆಯ ಸ್ವರ ಸಂಭ್ರಮ, ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಅಭಿವ್ಯಕ್ತಿಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸಂಗೀತ ಕಾರ್ಯಕ್ರಮವೇ ಭೀಮ ಗಾಯನವಾಗಿದೆ ಎಂದು ಎಡಿಸಿ ಡಾ. ಔದ್ರಾಮ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು.

ಚಿಂತಾಮಣಿಯ ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘ ಈವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು. ಡಾ. ಬಿ.ಆರ್. ಅಂಬೇಡ್ಕರ ಅವರು ಭೇಟಿ ನೀಡಿರುವ ರಾಜ್ಯದ ಪ್ರಮುಖ ಸ್ಥಳಗಳ ಪೈಕಿ ಆಯ್ದ ಸ್ಥಳಗಳಲ್ಲಿ ಭೀಮ ಗಾಯನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾ.9ರಂದು ಭೀಮ ಗಾಯನ ನಡೆಯಲಿರುವುದರಿಂದ ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಜನನಿಬಿಡ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲಾಗುವದು.ಭೀಮ ಗಾಯನ ಕಾರ್ಯಕ್ರಮಕ್ಕೆ ಅವಶ್ಯಕ ವೇದಿಕೆ, ಆಸನ ವ್ಯವಸ್ಥೆ, ಕುಡಿಯುವ ನೀರು, ಧ್ವನಿವರ್ಧಕ, ಬೆಳಕು ವ್ಯವಸ್ಥೆ, ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆಯ ಮುದ್ರಣ,ನಿಗದಿತ ಅವಧಿಯಲ್ಲಿ ಹಂಚಿಕೆ, ಗಣ್ಯರನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಮೆರಗು ಹೆಚ್ಚಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಡಿವೆಪ್ಪ ಸಾಲಗಲ್ ಮಾತನಾಡಿ, ಭೀಮ ಗಾಯನದ ಮೂಲಕ ಮಹನೀಯರ ಆದರ್ಶ ವಿಚಾರಧಾರೆಗಳನ್ನು ಜನಮಾನಸದಲ್ಲಿ ಜಾಗೃತಿಗೊಳಿಸುವ ಈ ಕಾರ್ಯಕ್ರವನ್ನು ಒಳಾಂಗಣ ರಂಗಮAದಿರದಲ್ಲಿ ಏರ್ಪಡಿಸದೇ ಜನನಿಬಿಡ ಪ್ರದೇಶದಲ್ಲಿ ಆಯೋಜಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವುದರೊಂದಿಗೆ ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬರಲಿದೆ ಎಂದು ಸಲಹೆ ನೀಡಿದರು.

ಶ್ರೀನಾಥ ಪೂಜಾರಿ ಮಾತನಾಡಿ, ಮಹನೀಯರ ವಿಚಾರಗಳು ಜನಮಾನಸಕ್ಕೆ ಮುಟ್ಟುವಂತಾಗಲು ಭೀಮ ಗಾಯನ ಮಹೋತ್ಸವವಾಗುವ ನಿಟ್ಟಿನಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಬೇಕು ಎಂದು ಹೇಳಿದರು.

ಭೀಮರಾಯ ಜಿಗಜಿಣಗಿ ಮಾತನಾಡಿ, ಕಾರ್ಯಕ್ರಮವು ಹೆಚ್ಚು ಪ್ರಚಾರವಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ತಲುಪುವಂತೆ ಜನನಿಬಿಡ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸುವುದು ಹಾಗೂ ಕರಪತ್ರಗಳನ್ನು ಹಂಚುವುದರ ಮೂಲಕ ಪ್ರಚಾರ ಕೈಗೊಳ್ಳಲು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕರಾದ ಅಮರೇಶ ದೊಡಮನಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗಾಗಿ, ವಿವಿಧ ಇಲಾಖೆಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆ ಅನುಸಾರ ನಿರ್ವಹಿಸಲಾಗುವುದು ಎಂದರು.

ಈ ಸಂದರ್ಭಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚವ್ಹಾಣ ಕೆ.ಕೆ.ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿವಾನಂದ ಬ್ಯಾಹಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಸ್ಯಾಸಕರಾದ ರುದ್ರಯ್ಯ ಸಿ.ಹಿರೇಮಠ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ ಸೇರಿದಂತೆ ಡಾ. ಎಂ.ಆರ್. ಗುರಿಕಾರ, ಸೋಮನಗೌಡ ಕಲ್ಲೂರ, ದೇವೇಂದ್ರ ಮೀರೆಕರ್, ವಿದ್ಯಾವತಿ ಅಂಕಲಗಿ, ಪಿ.ಎಸ್. ರೋಣಿಹಾಳ, ಎಂ.ಆರ್ ದೊಡಮನಿ, ಕಿರಣ, ಶಂಕರಗೌಡ ಪಾಟೀಲ, ಅಭಿಷೇಕ ಪತ್ತಾರ, ಕಲಾವಿದರಾದ ರಂಗನಾಥ ಬತ್ತಾಸೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಾರ್ವಜನಿಕರು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಕಾರ್ಯಕ್ರಮದ ಮೊದಲಿಗೆ ಗೀತಗಾಯನದ ಮೂಲಕ ಸಭೆಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಸಲಹೆ ಸೂಚನೆ ನೀಡುವಂತೆ ಮನವಿ ಮಾಡಿದರು. ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ ವಂದಿಸಿದರು.

No comments:

Post a Comment