ಗೊಳಸಂಗಿ : ಕೆಲವೇ ಕೆಲವು ಶಿಕ್ಷಕರಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ಬರುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ಆದರ್ಶಮಯ ಜೀವನದ ಮೂಲಕ ಆದರ್ಶ ಸಮಾಜ ರೂಪಿಸುವ ಶಿಲ್ಪಿಗಳಾಗಬೇಕು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಸೋಮವಾರ ಗೊಳಸಂಗಿ ಗ್ರಾಮದ ಅಪ್ಪಣ್ಣ ದಳವಾಯಿ ಪ್ರೌಢ ಶಾಲಾ ಸಭಾಭವನದಲ್ಲಿ ಬಸವವನಬಾಗೇವಾಡಿ ತಾಲೂಕ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೊಲ್ಹಾರ, ನಿಡಗುಂದಿ ಹಾಗೂ ಬಸವವನಬಾಗೇವಾಡಿ ತಾಲೂಕ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಶಿಕ್ಷಕರ ದಿನಾಚರಣೆ ಆಚರಿಸುತ್ತಿರುವ ಶಿಕ್ಷಕರಿಗೆ ಶುಭಾಶಯ ತಿಳಿಸಿದರು.
ಸರ್ಕಾರ ತನ್ನ ಆದಾಯದಲ್ಲಿ ಅತಿಹೆಚ್ಚು ಅನುದಾನವನ್ನು ಶಿಕ್ಷಣ ಹಾಗೂ ವೈದ್ಯಕೀಯ ಇಲಾಖೆಗಳಿಗೆ ಆರ್ಥಿಕ ವೆಚ್ಚ ಮಾಡುತ್ತಿದೆ. ಹೀಗಾಗಿ ಶಿಕ್ಷಕರು ಗುಣಮಟ್ಟ ಹಾಗೂ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಮಾಜ ತಮ್ಮ ಮೇಲೆ ಇರಿಸಿರುವ ನಿರೀಕ್ಷ ಹುಸಿ ಆಗದಂತೆ ವೃತ್ತಿ ಘನತೆ ಮೆರೆಯಬೇಕು ಎಂದು ಸಲಹೆ ನೀಡಿದರು.
ತಮ್ಮ ಪತ್ನಿಯ ತಂದೆಯವರು ಶಿಕ್ಷಕರಾಗಿ, ನಿವೃತ್ತಿ ಹೊಂದಿದ್ದಾರೆ ಎಂದ ಸಚಿವರು, ಪಾಟೀಲ ಎಂಬ ಶಿಕ್ಷಕರೊಬ್ಬರು ಮಸಬಿನಾಳವದಿಂದ ದೇವರಹಿಪ್ಪರಗಿ ವರೆಗೆ ನಡೆದುಕೊಂಡುಹೋಗಿ ಪಾಠ ಮಾಡುತ್ತಿದ್ದರು. ಇಂಥ ಶಿಕ್ಷಕರು ಇಂದಿನ ಶಿಕ್ಷಕರಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಪ್ರಸಕ್ತ ಸಂದರ್ಭದಲ್ಲಿ ಸರ್ಕಾರ ಶಿಕ್ಷಕರ ಬೇಡಿಕೆ ಈಡೇರಿಕೆ ಮಾಡುತ್ತದೋ, ಇಲ್ಲವೋ ಆದರೆ ಸರ್ಕಾರ ಶಿಕ್ಷಕರ ಬೇಡಿಕೆ ಈಡೇರಿಸಲಿ ಎಂದು ಆಶಿಸಿದರು.
ಕೇಂದ್ರ ಸರ್ಕಾರ ಸೇರಿದಂತೆ ದೇಶದ ಯಾವುದೇ ರಾಜ್ಯ ಸಾಲ ಮಾಡದೇ ಬಜೆಟ್ ಮಂಡಿಸುವ ಹಾಗೂ ಅಭಿವೃದ್ಧಿ ಮಾಡುವ ಸ್ಥಿತಿ ಇಲ್ಲ. ರಾಜ್ಯದ ಸ್ಥಿತಿಯನ್ನೇ ಅವಲೊಕಿಸಿದರೆ 15 ಲಕ್ಷ ಕೋಟಿ ಸಾಲ ಮಾಡಿದ್ದೇವೆ.
ಸಾಲ ಮಾಡದೇ ಯಾವುದೇ ಸರ್ಕಾರ ನಡೆಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದೇಶದ 31 ರಾಜ್ಯಗಳ ಬಜೆಟ್ ನಲ್ಲಿ ಸಾಲ ಇಲ್ಲದ ಬಜೆಟ್ ಮಂಡನೆ ಇಲ್ಲ. ದೇಶದ ಎಲ್ಲ ರಾಜ್ಯಗಳ ಆರ್ಥಿಕ ಸ್ಥಿತಿಯೂ ಇದೇ ಎಂದು ವಿವರಿಸಿದರು.
ಒಟ್ಟು ಜನಸಂಖ್ಯೆಯಲ್ಲಿ : ಶೇ.3 ಜನರಿಗೆ ಸರ್ಕಾರ ಉದ್ಯೋಗ ಕೊಡಲು ಸಾಧ್ಯವಿಲ್ಲ. ಆದರೂ ಸರ್ಕಾರ ತನ್ನ ಆದಾಯದ ಬಹುತೇಕ ಹಣವನ್ನು ಸರ್ಕಾರಿ ನೌಕರರಿಗೆ ವೆಚ್ಚ ಮಾಡುತ್ತಿದೆ. ಈ ಅಂಶವನ್ನು ಅರಿತು ಸರ್ಕಾರಿ ನೌಕರರು ಹಾಗೂ ಶಿಕ್ಷಕರು ತಮ್ನ ಜವಾಬ್ದಾರಿ ನಿಭಾಯಿಸಿ, ಸಮಾಜದ ಋಣ ತೀರಿಸಬೇಕು ಎಂದು ಸಲಹೆ ಕಿವಿ ಮಾತು ಹೇಳಿದರು.
ಆದರೆ ಕೃಷಿ ಕ್ಷೇತ್ರ ಒಟ್ಟು ಜನಸಂಖ್ಯೆಯ ಶೇ.70-80 ರಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಿದೆ. ಭಾರತೀಯರು ಅನ್ನಕ್ಕೆ ದಾರಿಯಾಗಿರುವುದೇ ಕೃಷಿರಂಗ ಹಾಗೂ ಅನ್ನದಾತ ರೈತ ಎಂಬುದು ಹೆಮ್ಮೆಯ ಸಂಗತಿ. ಹೀಗಾಗಿ ಸರ್ಕಾರದ ಸೌಲಭ್ಯ ಪಡೆಯುವ ಶಿಕ್ಷಕರು ತಮ್ಮನ್ನು ತಾವು ಅರಿತು ಸೇವೆ ಸಲ್ಲಿಸಬೇಕು ಎಂದರು.
ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುವಲ್ಲಿ ಶಿಕ್ಷಕರು ಬದ್ಧತೆ ತೋರಬೇಕು ಎಂದರು.
ಕ್ರೀಡಾಪಟುಗಳಲ್ಲಿ ಹಲವರು ತಮ್ಮ ದುಡಿಮೆಯ ಹಣದಲ್ಲಿ ಬಹುತೇಕ ಹಣವನ್ನು ಸಮಾಜಕ್ಕೆ ವೆಚ್ಚ ಮಾಡು ಮಾಡುತ್ತಿದ್ದಾರೆ.
ಅಂಬಾನಿ, ಅದಾನಿ ಹೆಸರು ಮಾತ್ರ ದೊಡ್ಡದು. ಆದರೆ ಟಾಟಾ, ಇನ್ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ, ಅಜೀಂ ಪ್ರೇಮಜೀ ಅವರಂಥ ಉದ್ಯಮಿಗಳು ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವಲ್ಲಿ ಮುಂಚೂಣಿಯಲ್ಲಿ ಇರುವುದು ಸಂತಸದ ಸಂಗತಿ ಎಂದರು.
ಶಿಕ್ಷಕರು ಬಸವವನಬಾಗೇವಾಡಿ ಗುರು ಭವನ ಕಟ್ಟಲು ಮುಂದಾಗಿ ಎಂದು ಸಲಹೆ ನೀಡಿದ ಸಚಿವರು, ಜಿಲ್ಲೆಯಲ್ಲಿ ನನ್ನ ವಿಧಾನಸಭೆ ಕ್ಷೇತ್ರದ ಕನಿಷ್ಟ ಐದಾರು ಮಕ್ಕಳಾದರೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ತರುವಂತೆ ರೂಪಿಸುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.
ಶಿಕ್ಷಕರು ತಮ್ಮ ವೃತ್ತಿ ಘನೆಯ ಸಾಧನೆ ಮೂಲಕ ಪ್ರಶಸ್ತಿ ಪಡೆಯುವಂತೆ ಆಗಬೇಕು. ಆದರೆ ಈಚೆಗೆ ಶಿಫಾರಸು ಮೂಲಕ ಪ್ರಶಸ್ತಿ ಪಡೆಯವ ಪ್ರವೃತ್ತಿಯಲ್ಲಿ ತೊಡಗಿದ್ದು, ಇಂಥ ವ್ಯವಸ್ಥೆಯಿಂದ ಶಿಕ್ಷಕರು ವಿಮುಖರಾಗಬೇಕು ಎಂದು ಕಿವಿ ಮಾತು ಹೇಳಿದರು.
ವಿಜಯಪುರ ಜಿಲ್ಲೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿರುವುದು ಅತ್ಯಂತ ಖೇದಕರ ಸಂಗತಿ. ಜಿಲ್ಲೆಯ ಭವಿಷ್ಯ ಮಕ್ಕಳ ಶೈಕ್ಷಣಿಕ ಫಲಿತಾಂಶ ಹಾಗೂ ಶೈಕ್ಷಣಿಕ ಅಭಿವೃದ್ಧಿ ಮೇಲೆ ಅವಲಂವಿತವಾಗಿದೆ ಇದನ್ನರಿತು ಶಿಕ್ಷಕರು ಬದ್ಧತೆಯ ಸೇವೆ ಸಲ್ಲಿಸಲಿ ಎಂದರು.
ಗೊಳಸಂಗಿ ಮೂಲದ ಕಾ.ವು.ಬಿಜಾಪುರ ಸೇರಿದಂತೆ ಜಿಲ್ಲೆಯಲ್ಲಿ ಅನುಕರಣೀಯ ಶಿಕ್ಷಕರಾಗಿದ್ದ ಈಶ್ವರಚಂದ್ರ ಚಿಂತಾಮಣಿ, ಶರಣಪ್ಪ ಕಂಚ್ಯಾಣಿ, ಫ.ಗು.ಸಿದ್ಧಾಪುರ ಸೇರಿದಂತೆ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಜಿಲ್ಲೆ ಶಿಕ್ಷಕರು ಇಂದಿನ ಶಿಕ್ಷಕರಿಗೆ ಆದರ್ಶವಾಗಲಿ ಎಂದರು.
ಉತ್ತಮ ಶಿಕ್ಷಣ ವ್ಯವಸ್ಥೆ ಇರುವ ದೇಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇರುತ್ತವೆ. ಇದಕ್ಕೆಲ್ಲ ಪ್ರಮುಖ ಕಾರಣ ಶಿಕ್ಷಕರು ಎಂದರು.
ಭಾಷಾ ಸಂಘರ್ಷ ಹೆಚ್ಚುತ್ತಿದ್ದು, ಭಾಷೆ, ರಾಜ್ಯದ ಗಡಿ ಮೀರಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಇಡೀ ದೇಶ ರಾಷ್ಟ್ರದ ಅಧ್ಯಕ್ಷರನ್ನಾಗಿ ಸ್ವೀಕರಿಸಿತ್ತು. ಇಂದಿನ ಶಿಕ್ಷಕರು ರಾಷ್ಟ್ರೀಯ ಮನೋಭಾವ ಬೆಳೆಸಿಕೊಂಡು ಸಾಧಕ ಪ್ರತಿಭೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ವಿಶ್ವದ ಯಾವುದೇ ದೇಶಕ್ಕೆ ಹೋದರೂ ಭಾರತೀಯ ಮೂಲದ ವೈದ್ಯರು, ಎಂಜಿನಿಯರಗಳು, ಜಗತ್ತಿನ ಕಂಪನಿಗಳಲ್ಲಿ ಬಹುತೇಕ ಸಿಇಒ ಗಳು ಭಾರತೀಯರೇ ಆಗಿದ್ದಾರೆ ಎಂಬುದು ಹಿರಿಮೆಯ ಸಂಗತಿಯಾಗಿದ್ದು, ಇದಕ್ಕೆಲ್ಲ ಪ್ರಮುಖ ಕಾರಣ ಶಿಕ್ಷಕರು ನೀಡಿದ ಜ್ಞಾನ ಎಂಬುದು ಗಮನೀಯ ಎಂದರು.
ಬಸವವನಬಾಗೇವಾಡಿ ವಿರಕ್ತ ಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರ ದಳವಾಯಿ, ಗ್ರಾ.ಪಂ. ಅಧ್ಯಕ್ಷ ರಾವುತ್ ಸೀಮಿಕೇರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಹಿಬೂಬ ನಾಯ್ಕೋಡಿ, ಚಂದ್ರಶೇಖರ ಹಳೇಮನಿ, ಸಂತೋಷ ಗಣಾಚಾರಿ, ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳದ ನಿರ್ದೇಶಕರಾದ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಹಾರಿವಾಳ, ಜಾನಪದ ಸಾಹಿತಿಗಳಾದ ಅಮರಯ್ಯಸ್ವಾಮಿ ಜಾಲಿಬೆಂಚಿ, ತಹಶಿಲ್ದಾರಾದ ವೈ.ಎಸ್. ಸೋಮನಕಟ್ಟಿ, ಎ.ಡಿ.ಅಮರವಾಡಗಿ, ಸಂತೋಷ ಮ್ಯಾಗೇರಿ, ತಾ.ಪಂ. ಇಒಗಳಾದ ವೆಂಕಟೇಶ ವಂದಾಲ, ಸುನಿಲ ಮದ್ದಿನ, ಬಿಇಒ ವಸಂತ ರಾಠೋಡ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಮಂಗಾನವರ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment