Tuesday, December 12, 2023

ಪ್ರತ್ಯೇಕ ಬೈಕ್ ಅಪಘಾತ: ಇಬ್ಬರು ಮಕ್ಕಳು ಸೇರಿ ಏಳು ಜನರಿಗೆ ಗಾಯ


ಮುದ್ದೇಬಿಹಾಳ: ಪಟ್ಟಣದಿಂದ ಢವಳಗಿ ಮಾರ್ಗವಾಗಿ ವಿಜಯಪುರದತ್ತ ತೆರಳುವ ಶಿರಾಡೋಣ-ಲಿಂಗಸುಗೂರ ರಾಜ್ಯ ಹೆದ್ದಾರಿಯ ಬಸರಕೋಡ ಕ್ರಾಸ್, ಮಡಿಕೇಶ್ವರ ಕ್ರಾಸ್ ಹತ್ತಿರ ಮಂಗಳವಾರ ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಬೈಕ್ ಅಪಘಾತಗಳಲ್ಲಿ ಪತಿ, ಪತ್ನಿ, ಇಬ್ಬರು ಮಕ್ಕಳು, ಮಾವ ಮತ್ತು ಅಳಿಯ ಸೇರಿ ಏಳು ಜನ ಗಾಯಗೊಂಡಿರುವ ಘಟನೆ ನಡೆದಿದೆ.

ಬಸರಕೋಡ ಕ್ರಾಸ್ ಹತ್ತಿರ ಢವಳಗಿಯ ತೋಟವೊಂದರಲ್ಲಿ ಕೆಲಸಕ್ಕೆ ಹೊರಟಿದ್ದ ಕುಂಚಗನೂರ ಗ್ರಾಮದ ನೀಲಪ್ಪ ಪೂಜಾರಿ ಎಂಬಾತ ಮದ್ಯದ ಅಮಲಿನಲ್ಲಿ ತಾನು ಓಡಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮುಳ್ಳುಕಂಟಿಗಳಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದಾನೆ. ಇನ್ನೊಂದು ಘಟನೆಯಲ್ಲಿ ಮಡಿಕೇಶ್ವರ ಕ್ರಾಸ್ ಹತ್ತಿರ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದು ಮುದ್ದೇಬಿಹಾಳ ತಾಲೂಕು ಸರೂರು ಗ್ರಾಮದಲ್ಲಿ ದೇವರಿಗೆ ಕಾಯಿ ಒಡೆಸಿಕೊಂಡು ಬಸವನ ಬಾಗೇವಾಡಿ ತಾಲೂಕು ವಡವಡಗಿ ಗ್ರಾಮಕ್ಕೆ ಹೊರಟಿದ್ದ ಸರೂರು ಗ್ರಾಮದ ಪತಿ ಸಂಗಪ್ಪ ಕಟಗೂರ, ಪತ್ನಿ ಪ್ರಿಯಾಂಕ, 5 ವರ್ಷದ ಪುತ್ರಿ ಚೈತ್ರಾ (ಸನ್ನಿಧಿ), 2 ವರ್ಷದ ಪುತ್ರ ಹಣಮಂತ ಗಂಭೀರ ಗಾಯಗೊಂಡಿದ್ದಾರೆ. ಎದುರಿನಿಂದ ಡಿಕ್ಕಿ ಹೊಡೆದ ಇನ್ನೊಂದು ಬೈಕ್‌ನಲ್ಲಿದ್ದ ಅಳಿಯ ಮುದ್ದೇಬಿಹಾಳದ ಸಂಗಮೇಶ ಕುಂಟೋಜಿ, ಮಾವ ನಾಗರಾಳ ಗ್ರಾಮದ ಮಲ್ಲಿಕಾರ್ಜುನ ಪಲಗಲದಿನ್ನಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸೈ ಸಂಜಯ್ ತಿಪ್ಪರಡ್ಡಿ, ಕಾನ್ಸಟೇಬಲ್ ಪರಶುರಾಮ ದೊಡಮನಿ ಅವರು ಭೇಟಿ ನೀಡಿ ಸ್ಥಳ ಪಂಚನಾಮೆ ನಡೆಸಿ ಕಾನೂನು ಕ್ರಮ ಕೈಕೊಂಡರು. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಎರಡು ಅಪಘಾತ ಸಂಭವಿಸಿ 7 ಜನರು ಗಾಯಗೊಂಡ ಘಟನೆ ಸ್ವಲ್ಪ ಸಮಯದ ಅಂತರದಲ್ಲಿ ನಡೆದ ಕಾರಣ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಡಲು ಉಚಿತ ಆರೋಗ್ಯ ಕವಚ ಅಂಬ್ಯೂಲೆನ್ಸ್ ಕೊರತೆ ಎದ್ದು ಕಂಡಿತು. ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಮತ್ತು ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಉಚಿತ ಆರೋಗ್ಯ ಕವಚ ಅಂಬ್ಯೂಲೆನ್ಸ್ಗಳು ಮೊದಲು ದಾಖಲಾದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದವು. ಹೀಗಾಗಿ ನಂತರ ದಾಖಲಾದ ಕಟಗೂರ ಕುಟುಂಬ ಆರೋಗ್ಯ ಕವಚ ದೊರೆಯದೆ ಪರದಾಡುವಂತಾಯಿತು. ಆಸ್ಪತ್ರೆಯಲ್ಲಿದ್ದ ಇನ್ನೊಂದು ಅಂಬ್ಯೂಲೆನ್ಸ್ ಹೆರಿಗೆಯಲ್ಲಿ ತೊಂದರೆಯಾಗಿದ್ದ ತುಂಬು ಗರ್ಭಿಣಿಯನ್ನು ಕರೆದೊಯ್ದಿತ್ತು. ಆಸ್ಪತ್ರೆಯ ಇನ್ನುಳಿದ ಒಂದು ಅಂಬ್ಯೂಲೆನ್ಸ್ಗೆ ಡೀಜೈಲ್ ಹಾಕಿಸಿಕೊಂಡು ಹೋಗಬೇಕಿತ್ತು. ಕಟಗೂರ ಅವರು ಬಡವರಾಗಿದ್ದರಿಂದ ಡೀಜೈಲ್ ಹಾಕಿಸಲು ಆರ್ಥಿಕ ಸಮಸ್ಯೆ ಎದುರಾಯಿತು. ಆಗ ಸ್ಥಳದಲ್ಲಿದ್ದ ಸರೂರ ಗ್ರಾಮದವರೇ ಆಗಿರುವ ಸಮಾಜ ಸೇವಕ ಶ್ರೀ ಸಾಯಿ ಮಾರ್ಟ ಮಾಲಿಕ ಬಸನಗೌಡ ಪಾಟೀಲ (ಸರೂರ) ಅವರು ತಮ್ಮ ಸ್ವಂತ ಹಣದಲ್ಲಿ ಡೀಜೈಲ್ ಹಾಕಿಸಲು ನೆರವಿಗೆ ಬಂದರು. ಇನ್ನೇನು ಡೀಜೈಲ್ ಹಾಕಿಸಬೇಕು ಎನ್ನುವಷ್ಟರಲ್ಲಿ ಆರೋಗ್ಯ ಕವಚ ಬರುತ್ತಿರುವ ಮಾಹಿತಿ ಆಸ್ಪತ್ರೆಯವರಿಗೆ ಲಭ್ಯವಾಗಿ ಡೀಜೈಲ್ ಹಾಕಿಸುವುದನ್ನು ತಡೆದು ಆರೋಗ್ಯ ಕವಚದಲ್ಲಿಯೇ ಕಟಗೂರ ಕುಟುಂಬದವರನ್ನು ಜಿಲ್ಲಾಸ್ಪತ್ರೆಗೆ ಕಳಿಸಿದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

13-12-2023 EE DIVASA KANNADA DAILY NEWS PAPER

Monday, December 11, 2023

ವಿರೋಧ ಪಕ್ಷ ಯಾವುದೇ ವಿಚಾರ ಎತ್ತಿದರೂ ಕೂಡ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ.: ಸಿಎಂ ಸಿದ್ದರಾಮಯ್ಯ

ಈ ದಿವಸ ವಾರ್ತೆ

ಬೆಳಗಾವಿ: ವಿರೋಧ ಪಕ್ಷಗಳು ಯಾವುದೇ ವಿಚಾರ ಎತ್ತಿದರೂ ಕೂಡ  ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ಯಾವುದನ್ನೂ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ ಎಂದು  ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

 ಇವತ್ತಿನವರೆಗೆಯೂ ಬರಗಾಲದ ಚರ್ಚೆಯಾಯಿತು. ಇಂದು ಅದಕ್ಕೆ ಉತ್ತರ ನೀಡುತ್ತೇವೆ. ಈಗಾಗಲೇ ಪ್ರಸ್ತಾಪವಾಗಿರುವ ಬಗ್ಗೆ ಉತ್ತರ ನೀಡುತ್ತೇವೆ ಎಂದರು. 

ಬಿಜೆಪಿಯೊಳಗೆ  ಸಮನ್ವಯ ಸಾಧ್ಯವೇ ಇಲ್ಲ;

ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆಯಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ  ಬಿಜೆಪಿಯೊಳಗೆ ಎಂದಿಗೂ ಸಮನ್ವಯ ಇಲ್ಲವೇ ಇಲ್ಲ. ಅವರು  ಆಪರೇಷನ್ ಕಮಲದ ಮುಖಾಂತರ ಅಧಿಕಾರಕ್ಕೆ ಬಂದಿದ್ದಾರೆ. ನಂತರ ಜನ ಅವರನ್ನು ತಿರಸ್ಕರಿಸಿದ್ದಾರೆ. ನಂತರ  ಸಮನ್ವಯ ಬರಲು ಸಾಧ್ಯವೇ ಇಲ್ಲ. ಅವರಲ್ಲಿ ಎರಡು ಗುಂಪುಗಳಿವೆ ಎಂದರು. 

ತಪ್ಪಿತಸ್ಥರ ವಿರುದ್ಧ ಕ್ರಮ

ಬೆಳಗಾವಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯವೆಸಗಿರುವ ಬಗ್ಗೆ  ಮಾತನಾಡಿ ಯಾರು ತಪ್ಪಿತಸ್ಥರೊ ಅವರ ಮೇಲೆ ಕಠಿಣ  ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. 

ಪಂಚಾಮಸಾಲಿ ನಾಯಕರು ಹಾಗೂ ಸ್ವಾಮೀಜಿ ಯವರೊಂದಿಗೆ ಮಾತನಾಡುತ್ತೇನೆ:

ಪಂಚಾಮಸಾಲಿ ನಾಯಕರ ಮನವಿಗೆ ಸ್ಪಂದಿಸಿಲ್ಲ ಎಂದು ಸ್ವಾಮೀಜಿಗಳು 13 ರಂದು ವಿಧಾನಸಭೆ ಅಧಿವೇಶನ ಮುಗಿದ ನಂತರ ಅವರೊಂದಿಗೆ ಚರ್ಚೆ  ಮಾಡಲಾಗುತ್ತವೆ ಎಂದು ತಿಳಿಸಲಾಗಿದೆ ಎಂದರು.  ಬೆಳಗಾವಿಯಲ್ಲಿ ಪಂಚಾಮಸಾಲಿ ನಾಯಕರು ಹಾಗೂ ಸ್ವಾಮೀಜಿ ಯವರೊಂದಿಗೆ ಮಾತನಾಡುತ್ತೇನೆ ಎಂದರು.

ವಿಧಾನಸಭಾಧ್ಯಕ್ಷರಿಗೆ ಸಂಬಂಧಿಸಿದ್ದು:

 ಸುವರ್ಣ ಸೌಧದಲ್ಲಿರುವ ಸಾರ್ವರ್ಕರ್ ಫೋಟೋ ತೆಗೆಯುವ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ವಿಧಾನಸಭಾಧ್ಯಕ್ಷರಿಗೆ ಸಂಬಂಧಿಸಿದ್ದು ಎಂದರು. 

ಬಿಜೆಪಿ ಮತ್ತು ಜೆಡಿಎಸ್ ಭ್ರಮಾಲೋಕದಲ್ಲಿದ್ದಾರೆ:

ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ  ಬಿಜೆಪಿ ಮತ್ತು ಜೆಡಿಎಸ್ ನೀರಿನಿಂದ ತೆಗೆದ ಮೀನಿನಂತೆ ವಿಲಿ ವಿಲಿ ಎಂದು ಒದ್ದಾಡುತ್ತಿದ್ದು, ಭ್ರಮಾಲೋಕದಲ್ಲಿದ್ದಾರೆ ಎಂದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು

ಬಾಲ್ಯವಿವಾಹ ತಡೆಗೆ ವ್ಯಾಪಕ ಜಾಗೃತಿ-ವಿವಾಹ ಪೂರ್ವ ಪತ್ತೆಗೆ : ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ


ಈ ದಿವಸ ವಾರ್ತೆ

 ವಿಜಯಪುರ : ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸಮರ್ಪಕ ಜಾರಿ ಸೇರಿದಂತೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದ ಮತ್ತು ಸಂಕಷ್ಟಕ್ಕೊಳಗಾಗಿರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ಮತ್ತು ಪುನರವಸತಿ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ 2023-24ನೇ ಸಾಲಿನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಹಾಗೂ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹವಾಗದಂತೆ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸ್ಥಳೀಯ ಆಡಳಿತ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಬಾಲ್ಯ ವಿವಾಹಗಳನ್ನು ಪತ್ತೆ ಹಚ್ಚಿ, ಸಾಧ್ಯವಾದಷ್ಟು ಬಾಲ್ಯ ವಿವಾಹವಾಗುವ ಮೊದಲೇ ತಡೆಗಟ್ಟಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. 

ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಬಾಲ್ಯವಿವಾಹಕ್ಕೆ ಪ್ರೊತ್ಸಾಹ ನೀಡುವವರ ಮೇಲೆ ಪ್ರಕರಣ ದಾಖಲಿಸಬೇಕು. ಬಾಲ್ಯವಿವಾಹ ನಿಷೇಧ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಹಾಳಾಗುವ ಕುರಿತು ಜನರಲ್ಲಿ ತಿಳುವಳಿಕೆ ನೀಡುವ ಮೂಲಕ ಬಾಲ್ಯ ವಿವಾಹ ತಡೆಗೆ ಕ್ರಮ ವಹಿಸುವಂತೆ ಸೂಚಿಸಿದ ಅವರು, ಬಾಲ್ಯವಿವಾಹ ನಡೆಯುವ ಕುರಿತು ನೆರೆಹೊರೆಯವರು, ಸಾರ್ವಜನಿಕರು ಸಹ ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಮೂಲಕ ಬಾಲ್ಯವಿವಾಹ ತಡೆಗಟ್ಟಲು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. 

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ 2005ರನ್ವಯ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿ, ತಾತ್ಕಾಲಿಕವಾಗಿ ಆಶ್ರಯ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು. 


ಕುಟುಂಬದಿಂದ ನಿರ್ಲಕ್ಷಿಸಪಟ್ಟವರು, ಕೌಟುಂಬಿಕ ಕಲಹ, ವಿವಾಹ ವಿಚ್ಛೇಧನ, ಪೊಕ್ಸೊ ಪ್ರಕರಣ ಸೇರಿದಂತೆ ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿ ಶಕ್ತಿ ಸದನ ಸ್ವಾಧಾರ ಗೃಹ ಯೋಜನೆಯಡಿ ಆಶ್ರಯ ಪಡೆದ 1580 ಮಹಿಳೆಯರು ಮತ್ತು 273 ಮಕ್ಕಳಿಗೆ ಆಹಾರ, ಶಿಕ್ಷಣ, ಸಮಾಲೋಚನೆ, ವೈದ್ಯಕೀಯ ಕುಟುಂಬಕ್ಕೆ ಪುನರ್‌ಮಿಲನ್ ಮತ್ತು ಕಾನೂನಿನ ನೆರವಿನೊಂದಿಗೆ ಅವರ ನೈಪುಣ್ಯತೆಯನುಸಾರವಾಗಿ ಸ್ವಯಂ ಉದ್ಯೋಗ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಯನ್ನಾಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು. 

ಜಿಲ್ಲೆಯ ವಿಜಯಪುರ, ಸಿಂದಗಿ ಬಸವನಬಾಗೇವಾಡಿಯಲ್ಲಿನ ಬಾಲಕಿಯರ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವಸತಿ ನಿಲಯಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳ ಸ್ಥಿತಿಗತಿ ಕುರಿತು ಹಾಗೂ ಸಂಬಂಧಿಸಿದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ತಿಂಗಳಲ್ಲಿ ಒಂದು ಬಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಗಲು ಮತ್ತು ರಾತ್ರಿ ಮಹಿಳಾ ವಾರ್ಡಗಳು ಕಾರ್ಯನಿರತವಾಗಿರುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ವಿಜಯಪುರದ ಬಾಲಕಿಯರ ಬಾಲಮಂದಿರದ ಸುಧಾರಣೆ ಕ್ರಮ ಕೈಗೊಂಡು ಬಾಲಮಂದಿರದ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. 

ಮಾತೃವಂದನಾ ಯೋಜನೆಯಡಿ ನಿಗದಿತ ಪ್ರಗತಿ ಸಾಧಿಸಿ ಗುರಿ ಹೆಚ್ಚಿಸಬೇಕು. ಗರ್ಭೀಣ ಮಹಿಳೆಯರಿಗೆ ಸಮರ್ಪಕವಾಗಿ ಪೌಷ್ಠಿಕಾಂಶ ಆಹಾರ ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವರ ಜವಾಬ್ದಾರಿಗಳ ಕುರಿತು ತರಬೇತಿ ಒದಗಿಸಬೇಕು. ಜಿಲ್ಲೆಯಲ್ಲಿ ಶಾಲೆಯಿಂದ ಹೊರುಗಳಿದ ಹೆಣ್ಣು ಮಕ್ಕಳ ಸಮೀಕ್ಷೆ ನಡೆಸಬೇಕು. ಆ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆ ತರಲು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು. 

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಕೇಂದ್ರಗಳಲ್ಲಿ ಪೋಕ್ಸೋ, ಬಾಲ್ಯವಿವಾಹ, ಅಪಹರಣ, ಲೈಂಗಿಕ ಹಲ್ಲೆ, ಕಿರುಕುಳ ಸೇರಿದಂತೆ ವಿವಿಧ ದೌರ್ಜನ್ಯಕ್ಕೊಳಗಾದವರನ್ನು ಕೌನ್ಸೆಲಿಂಗ ಪ್ರಕ್ರಿಯೆಗೊಳಪಡಿಸಿ ಮನೋಸ್ಥೈರ್ಯ ಹೆಚ್ಚಿಸಬೇಕು. ಈ ಸಖಿ ಕೇಂದ್ರಗಳು 24/7 ಕಾರ್ಯನಿರ್ವಹಿಸಬೇಕು. ಕೇಂದ್ರದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆ ನಿರ್ವಹಣೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ ಸೂಚಿಸಿ, ಕೇಂದ್ರದಲ್ಲಿ ಡಿ ಗ್ರೂಪ್ ನೌಕರರ ನಿಯೋಜನೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. 

ಕೌಟುಂಬಿಕ ದೌಜನ್ಯಕ್ಕೊಳಗಾದ ಮಹಿಳೆಯರಿಗೆ ಕೌನ್ಸೆಲಿಂಗ್ ನಡೆಸಬೇಕು.ಮೊದಲು ಪ್ರಕರಣ ದಾಖಲಿಸಿ ಪ್ರಕರಣ ವರದಿಯಾದ ನಂತರ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ಒದಗಿಸಬೇಕು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪ್ರೊತ್ಸಾಹ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ ಕುಂದರ್ ಹೇಳಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಕೌಶಲ್ಯಾಭಿವೃದ್ದಿ ಅಧಿಕಾರಿ ಸಿ.ಬಿ.ಕುಂಬಾರ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು

12-12-2023 EE DIVASA KANNADA DAILY NEWS PAPER