Wednesday, September 6, 2023

ಧರ್ಮಕ್ಕೋಸ್ಕರ ಮನುಷ್ಯ ಅಲ್ಲ-ಮನುಷ್ಯನಿಗಾಗಿ ಧರ್ಮ: ಮುಖ್ಯಮಂತ್ರಿ ಸಿದ್ದರಾಮಯ್ಯ

 


ಈ ದಿವಸ ವಾರ್ತೆ

ಬೆಂಗಳೂರು ಸೆ 6 : ಧರ್ಮಕ್ಕೋಸ್ಕರ ಮನುಷ್ಯ  ಅಲ್ಲ. ಮನುಷ್ಯನಿಗಾಗಿ ಧರ್ಮ ಇದೆ. ಮಾನವನಾಗಿ ಹುಟ್ಟಿದ ಕೃಷ್ಣ ಯಾವತ್ತೂ ಕೈಯಲ್ಲಿ ಶಸ್ತ್ರ ಹಿಡಿಯದೆ ದೈವತ್ವಕ್ಕೆ ಏರಿದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯನ್ನು‌ ಉದ್ಘಾಟಿಸಿ ಮಾತನಾಡಿದರು. 

ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ದ್ವೇಷಿಸುವುದು ಅಧರ್ಮ. ಮನುಷ್ಯ ದ್ವೇಷದ ಅಧರ್ಮದ ವಿರುದ್ಧವೇ ಕೃಷ್ಣ ಕೈಯಲ್ಲಿ ಶಸ್ತ್ರ ಹಿಡಿಯದೆ ಹೋರಾಡಿ ಧರ್ಮ ಸ್ಥಾಪನೆ ಮಾಡಿದ ಎಂದರು. 

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಮನುಷ್ಯ ಪ್ರೀತಿಯ ಸಮಾನತೆಯ ಸಮಾಜ ಸೃಷ್ಟಿ ಆಗಬೇಕು ಎನ್ನುವುದಾಗಿತ್ತು. ಸ್ವತಂತ್ರ ಭಾರತಕ್ಕೆ ಸಂವಿಧಾನ ಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವೂ ಇದೇ ಆಗಿತ್ತು. ಪ್ರತಿಯೊಬ್ಬರಿಗೂ ಅವರವರ ಇಷ್ಟದ ಧರ್ಮವನ್ಮು ಒಪ್ಪಿಕೊಳ್ಳುವ, ಆಚರಿಸುವ ಸ್ವಾತಂತ್ರ್ಯವನ್ನು ನೀಡಿತು. ಜಾತಿ, ಧರ್ಮ ಆಧಾರಿತ ತಾರತಮ್ಯ ಮತ್ತು ಅಸಮಾನತೆಯನ್ನು ಸಂವಿಧಾನಬಾಹಿರ ಎಂದು ಅಂಬೇಡ್ಕರ್ ಘೋಷಿಸಿದರು. 

ಹೀಗಾಗಿ ಸಂವಿಧಾನವನ್ನು ರಕ್ಷಿಸುವವರ ಕೈಯಲ್ಲಿ ಅಧಿಕಾರ ಇರಬೇಕು. ಸಂವಿಧಾನ ವಿರೋಧಿಗಳ ಕೈಗೆ ದೇಶದ ಅಧಿಕಾರವನ್ನು ನೀಡಿ ಪರಿತಪಿಸಬೇಡಿ ಎಂದು ಕಿವಿಮಾತು ಹೇಳಿದರು. 

ಯಾದವ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ತಾರತಮ್ಯದಿಂದ ಹೊರಗೆ ಬರಬಹುದು. ಶಿಕ್ಷಣದ ಮೂಲಕ ಅಸಮಾನತೆಯನ್ನು ತೊಡೆದು ಹಾಕಬಹುದು. ಯಾದವ ಸಮುದಾಯದ ಯಾರೊಬ್ಬರೂ ಶಾಸಕರಾಗಿ ಗೆಲ್ಲದ ಕಾರಣದಿಂದ ನಾನು ಈ ಸಮುದಾಯಕ್ಕೆ ಸೇರಿದ ನಾಗರಾಜ ಯಾದವರನ್ನು ಕರೆದು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆ. ಇದೇ ರೀತಿ ಸಮುದಾಯದ ಹಲವು ಮಂದಿಗೆ ನಾನಾ ರೀತಿಯ ರಾಜಕೀಯ ಪ್ರಾತಿನಿಧ್ಯ , ಅವಕಾಶಗಳನ್ನು ನಾನು ಒದಗಿಸಿದ್ದೇನೆ ಎಂದರು. 

ಗೊಲ್ಲ, ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಗೆ ಸೇರಿಸಿ ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಕೇಂದ್ರ ಸರ್ಕಾರ ಹಿಡ್ಕೊಂಡು ಕುಳಿತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರ ಇದ್ದಿದ್ದರೆ ಇಷ್ಟೊತ್ತಿಗೆ ನಾನೇ ಮಾಡಿ ಮುಗಿಸುತ್ತಿದ್ದೆ.  ಆದರೂ ನಮ್ಮ ಶಿಫಾರಸ್ಸನ್ನು ಜಾರಿ ಮಾಡುವಂತೆ ಕೇಂದ್ರಕ್ಕೆ ಒತ್ತಡ ಹಾಕುತ್ತೇವೆ. ಮೀಸಲಾತಿ ಪ್ರಮಾಣವನ್ನು ಶೇ 50 ಕ್ಕಿಂತ ಹೆಚ್ಚಿಸಲು ಕಾನೂನು ತರಲು ಅಗತ್ಯ ಕ್ರಮ ಕೈಮ ಕೈಗೊಂಡು ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. 

ಯಾದವ ಸಮುದಾಯದ ಒಬ್ಬರನ್ನು ಕೆಪಿಎಸ್ ಸಿ ಸದಸ್ಯರನ್ನಾಗಿ ಮಾಡಿ ಎನ್ನುವ ಬೇಡಿಕೆ ಇದೆ. ಮುಂದೆ ಅವಕಾಶ ಒದಗಿಸುತ್ತೇನೆ. ನಾನು ಸಾಮಾಜಿಕ ನ್ಯಾಯದಿಂದ ವಂಚಿತರಾದ ಎಲ್ಲಾ ಜಾತಿ ಸಮುದಾಯಗಳ ಪರವಾಗಿ ನಾನು ಇರುತ್ತೇನೆ‌. ಸಾಮಾಜಿಕ ನ್ಯಾಯದ ಹಿತಾಸಕ್ತಿ ಕಾಪಾಡುತ್ತೇನೆ ಎಂದು ಭರವಸೆ ನೀಡಿದರು. 

ಚಿತ್ರದುರ್ಗ ಜಿಲ್ಲೆ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನ ಮಠದ ಯಾದವಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿಧಾನ‌ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಸೀರ್ ಅಹಮದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

07-09-2023 EE DIVASA KANNADA DAILY NEWS PAPER

Sunday, September 3, 2023

ಸಿದ್ದಸಿರಿ ಸೌಹಾರ್ದ ಸಹಕಾರಿಯ 17ನೇ ವಾರ್ಷಿಕೋತ್ಸವ ಸಿದ್ದಸಿರಿ ಸಹಕಾರಿಗೆ ರೂ.11.11 ಕೋಟಿ ನಿವ್ವಳ ಲಾಭ

 

ಈ ದಿವಸ ವಾರ್ತೆ

ವಿಜಯಪುರ: ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ ಸಿದ್ದಸಿರಿ ಸೌಹಾರ್ದ ಸಹಕಾರಿ ರೂ. 2,244 ಕೋಟಿ ಠೇವಣಿ ಹೊಂದಿದ್ದು, 2022-23ನೇ ಸಾಲಿನಲ್ಲಿ ರೂ.11,11,11,111 ನಿವ್ವಳ ಲಾಭ ಗಳಿಸಿದೆ ಎಂದು ಸೌಹಾರ್ದದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 17ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲೇ ನಂಬರ್-1 ಸೌಹಾರ್ದ ಸ್ಥಾನದಲ್ಲಿರುವ ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ, ಸತತ 3ನೇ ವರ್ಷವೂ ಶೇ 25 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಹಕಾರಿಯ ಶೇರು ಬಂಡವಾಳ ರೂ.33 ಕೋಟಿ, ದುಡಿಯುವ ಬಂಡವಾಳ  ರೂ.2319 ಕೋಟಿ ಇದ್ದು, ಠೇವಣಿಗಳು ರೂ.2,244 ಕೋಟಿ, ಸಾಲವ ಮುಂಗಡ ರೂ.1,555, ಕಾಯ್ದಿಟ್ಟ ನಿಧಿ ರೂ.42 ಕೋಟಿ, ನಿಶ್ಚಿತ ಆಸ್ತಿಗಳು ರೂ.39 ಕೋಟಿ, ಹೂಡಿಕೆಗಳು ರೂ.171 ಕೋಟಿ ಹೊಂದಿದೆ. ರಾಜ್ಯಾದ್ಯಂತ ಸಂಪೂರ್ಣ ಗಣಕೀಕೃತ 154 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 14 ಸ್ವಂತ ಕಟ್ಟಡಗಳು, 20 ಖಾಲಿ ನಿವೇಶನ ನಗಳನ್ನು ಹೊಂದಿದೆ. 21,941 ಸದಸ್ಯರು ಇರುತ್ತಾರೆ  ಎಂದು ತಿಳಿಸಿದರು.

ಸಹಕಾರಿ ಲೇವಾದೇವಿ ವ್ಯವಹಾರ ಅಲ್ಲದೆ 3 ಸಿದ್ದಸಿರಿ ಭಾರತೀಯ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳು, ಜೇವರ್ಗಿಯಲ್ಲಿ ಸಿದ್ದಸಿರಿ ರೈತರ ಉಗ್ರಾಣ, ಸಿದ್ದಸಿರಿ ಇಂಧನ ಕೇಂದ್ರ, ವಿಜಯಪುರ, ಸಿಂದಗಿ, ಬಬಲೇಶ್ವರ, ಬಿಜ್ಜರಗಿ, ಝಳಕಿಯಲ್ಲಿ ಸಿದ್ದಸಿರಿ ಕೃಷಿ ಕೇಂದ್ರಗಳು ಸ್ಥಾಪನೆ. ವಿಜಯಪುರದಲ್ಲಿ 5 ಸಾವಿರ ಮೆಟ್ರಿಕ್ ಟನ್ ಸಾಮಾರ್ಥ್ಯದ ಸಿದ್ದಸಿರಿ ಶೀತಲ ಘಟಕ ಮತ್ತು ಸಂಸ್ಕರಣ ಘಟಕ, 28 ಸಿದ್ದಸಿರಿ ಇ- ಸ್ಟಾಂಪ್ ಕೇಂದ್ರಗಳು, ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ದಸಿರಿ ಎಥೆನಾಲ್ ಮತ್ತು ಪವರ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿರಿಯ ನಾಗರಿಕರು, ಸೈನಿಕರು, ಮಾಜಿ ಸೈನಿಕರು, ವಿಧವೆಯರು ಮತ್ತು ದಿವ್ಯಾಂಗ ಠೇವಣಿದಾರರಿಗೆ ಶೆ 0.5 ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. 6 ವರ್ಷಕ್ಕೆ ಹಣ ದ್ವಿಗುಣ ನೀಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ 5 ವರ್ಷ 8 ತಿಂಗಳಿಗೆ ಕೊಡಲಾಗುತ್ತದೆ. ಇದಲ್ಲದೇ, ಸಿದ್ದಸಿರಿ ಲಕ್ಕಿ ಗೋಲ್ಡ್ ಆರ್.ಡಿ ಸ್ಲಿಮ್ ಸೌಲಭ್ಯ ಇರುತ್ತದೆ ಎಂದು ಹೇಳಿದರು.

ಇದೇ ವೇಳೆ ಈಚೆಗೆ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳು, ನಿಧನರಾದ ರಾಜಕೀಯ ಮುಖಂಡರು, ಬ್ಯಾಂಕಿನ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಂದ್ರಯಾನ-3 ಯಶಸ್ಸಿಗೆ ಬೆನ್ನೆಲುಬಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಹೆಮ್ಮೆಯ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕರಾಗಿ ಆಯ್ಕೆಯಾದ ರಾಮನಗೌಡ ಬ. ಪಾಟೀಲ ಯತ್ನಾಳ ಅವರನ್ನು ಹಾಗೂ ಅತ್ಯುತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಸಿದ್ದಸಿರಿ ಒಣದ್ರಾಕ್ಷಿ ಬ್ರಾಂಡ್ ಬಿಡುಗಡೆಗೊಳಿಸಲಾಯಿತು.

ಸೌಹಾರ್ದದ ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ್ ಚವ್ಹಾಣ, ಅಶೋಕಗೌಡ ತೊರವಿ, ಶೈಲಜಾ ಪಾಟೀಲ, ಸೀಮಾ ಕೋರೆ, ಸೋಮಶೇಖರ್ ಬಂಡಿ, ಡಾ.ಬಸನಗೌಡ ಪಾಟೀಲ ನಾಗರಾಳ ಹುಲಿ, ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕರು ಜೋತಿಬಾ ಖಂಡಗಾಳೆ, ಜಂಟಿ ವ್ಯವಸ್ಥಾಪಕ ನಿರ್ದೇಶಕರು ರಾಘವ ಅಣ್ಣಿಗೇರಿ ಮತ್ತಿತರರು ಇದ್ದರು.