Friday, September 1, 2023

ಆಡಳಿತ ನ್ಯಾಯಾಧೀಕರಣ ತರಬೇತಿಗೆ ಕಾನೂನು ಪದವೀಧರರ ಆಯ್ಕೆ

ವಿಜಯಪುರ : ಸಮಾಜ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿಗೆ  ಪರಿಶಿಷ್ಟ ಜಾತಿಯ 25 ಹಾಗೂ ಪರಿಶಿಷ್ಟ ಪಂಗಡದ 11 ಕಾನೂನು ಪದವೀಧರರನ್ನು ಆಯ್ಕೆ ಮಾಡಲಾಗಿದೆ. 

ಸಮಾಜ ಕಲ್ಯಾಣ ಇಲಾಖೆ ಹಾಗೂ ಪದವಿಪುರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆ.29ರಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 

ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲಿಕ ಮಾನವರ, ಕಚೇರಿ ಅಧೀಕ್ಷಕರಾದ ಅರವಿಂದ ಲಂಬು, ಪ್ರಥಮ ದರ್ಜೆ ಸಹಾಯಕ ಬಸವರಾಜ ಕಾಮಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Thursday, August 31, 2023

01-09-2023 EE DIVASA KANNADA DAILY NEWS PAPER

ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ದಿವಸ ವಾರ್ತೆ  ಬೆಂಗಳೂರು ಆ 31: ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸಂವಿಧಾನ ವಿರೋಧಿಗಳ ಒಡೆದು ಆಳುವ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜಯಂತೋತ್ಸವ ಮತ್ತು ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅವರು ಅಧ್ಯಕ್ಷರಾಗದೇ ಹೋಗಿದ್ದರೆ ನಮ್ಮ ದೇಶಕ್ಕೆ ಇಷ್ಟೊಂದು ಅರ್ಥಪೂರ್ಣವಾದ ಸಂವಿಧಾನ ದೊರೆಯುತ್ತಿರಲಿಲ್ಲ ಎಂದರು.

ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ತಮ್ಮ ಮುಖ್ಯಮಂತ್ರಿ ಸ್ಥಾನದ ಮೂಲಕ ಸಮರ್ಥವಾಗಿ ಜಾರಿ ಮಾಡಲು ದೇವರಾಜ ಅರಸು ಅವರು ಶ್ರಮಿಸಿದರು. ಹೀಗಾಗಿ ಅವರಿಗಿಂತ ಮುಂಚಿನ ಯಾವ ಮುಖ್ಯಮಂತ್ರಿಗಳೂ ಜಾರಿ ಮಾಡದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಯಾಗಿ ಜಾರಿ ಮಾಡಿದರು ಎಂದು ವಿವರಿಸಿದರು. 

ದೇವರಾಜ‌ಅರಸು ಅವರು ಉಳುವವನೇ ಭೂ ಒಡೆಯ ಎನ್ನುವ ಕಾನೂನನ್ನು ಬಿಜೆಪಿ ಯವರು ಉಲ್ಟಾ ಮಾಡಿ ಉಳ್ಳವನೇ ಭೂ ಒಡೆಯ ಎಂದು ಬದಲಾಯಿಸಿಬಿಟ್ಟಿದ್ದಾರೆ. ಇದಕ್ಕಾಗಿ ಸಂವಿಧಾನ 79 (a), (b) ವನ್ನೇ ರದ್ದುಪಡಿಸಿದ್ದಾರೆ ಎಂದು ಟೀಕಿಸಿದರು. 

ಸಂವಿಧಾನ ವಿರೋಧಿಗಳಿಗೆ, ಬಡವ-ಮಧ್ಯಮ ವರ್ಗದ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟರೆ ಸಾಮಾಜಿಕ ನ್ಯಾಯ ನೆಗೆದು ಬೀಳುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. 

ದೇವರಾಜ ಅರಸರು‌ ಹಾವನೂರು ವರದಿ ಜಾರಿ ಮಾಡುವವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿರಲಿಲ್ಲ. ಎಷ್ಟೇ ವಿರೋಧ ಬಂದರೂ ಎದೆಗುಂದದೆ ಎದೆಗಾರಿಕೆಯಿಂದ ಹಾವನೂರು ವರದಿ ಜಾರಿ ಮೀಡಿದ್ದು ಅರಸು ಅವರು ಎಂದು ಮೆಚ್ಚುಗೆ ಸೂಚಿಸಿದರು. 

ಅಧಿಕಾರ ಯಾರ ಕೈಗೆ ಕೊಡಬೇಕು ಎನ್ನುವ ಸ್ಪಷ್ಟ ತಿಳಿವಳಿಕೆ ದಲಿತ-ಶೂದ್ರ ಸಮುದಾಯ ಪಡೆದುಕೊಳ್ಳಬೇಕು. ದಲಿತ-ಶೂದ್ರ-ಬಡವ ಮತ್ತು ಮಧ್ಯಮ ವರ್ಗಗಳಿಗೆ ಬದುಕಿನ ಅವಕಾಶ ದೊರಕಿದ್ದು ಸಂವಿಧಾನದಿಂದ. ಈ ಸಂವಿಧಾನವನ್ನು ದ್ಷೇಷಿಸುವವರ ಕೈಗೆ ಅಧಿಕಾರ ಕೊಟ್ಟರೆ ಬಡವ-ಮಧ್ಯಮ ವರ್ಗದವರ ಉದ್ದಾರ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 

 ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ದಸಂಸ ಮುಖಂಡ ಡಿ.ಜಿ.ಸಾಗರ್ ಸೇರಿ ಸಂಘಟನೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


scp/tsp ಬಗ್ಗೆ BJP ಭಯಾನಕ ಸುಳ್ಳು ಹೇಳುತ್ತಿದೆ 

ಬಡವರ ಮತ್ತು ಮಧ್ಯಮ ವರ್ಗದವರ ಬದುಕಿಗೆ ಶಕ್ತಿ ತುಂಬುವ ಐದು ಗ್ಯಾರಂಟಿಗಳಿಗೆ scp/tsp ಹಣ ಬಳಕೆ ಎಂದು ಬಿಜೆಪಿ ಭಯಾನಕ ಸುಳ್ಳು ಹೇಳುತ್ತಿದೆ. ಇದನ್ನು ನಂಬಬೇಡಿ ದಾಖಲೆಗಳನ್ನು ನೋಡಿ ಬಿಜೆಪಿಯವರಿಗೆ ಪಾಠ ಕಲಿಸಿ ಎಂದರು.

Sunday, August 27, 2023

ತಂತ್ರಜ್ಞಾನದ ವೇಗ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ತರಬೇತಿ ಪತ್ರಕರ್ತರಿಗೆ ಅಗತ್ಯವಿದೆ: ಕೆ.ವಿ.ಪ್ರಭಾಕರ್

 

ಈ ದಿವಸ ವಾರ್ತೆ

ದಾವಣಗೆರೆ ಆ 27: ತಂತ್ರಜ್ಞಾನದ ಬೆಳವಣಿಗೆ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪತ್ರಕರ್ತರಿಗೆ ತರಬೇತಿ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 

ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ, ವಿಜೇತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು. 

ಪತ್ರಿಕೋದ್ಯಮವೂ ತಂತ್ರಜ್ಞಾನ ಮತ್ತು ಬದಲಾದ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು, ವೇಗವನ್ನು ಬದಲಾಯಿಸಿಕೊಳ್ಳುತ್ತಿದೆ. ಹಿಂದೆಲ್ಲಾ ಬರೆಯುವವರೊಬ್ಬರು, ಪ್ರೂಫ್ ನೋಡುವುದಕ್ಕೆ ಹಲವರು ಇರುತ್ತಿದ್ದರು. ಈಗ ಪ್ರೂಫ್ ರೀಡರ್ ಹುದ್ದೆಯೇ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳು ಅಸ್ತಿತ್ವ ಕಳೆದುಕೊಳ್ಳಬಹುದು. ಎಲ್ಲವನ್ನೂ ಸಂಪಾದಕರಿಂದ ವರದಿಗಾರರು ಮಾಡುವ ಕೆಲಸಗಳನ್ನೆಲ್ಲವನ್ನೂ ಮುಂದಿನ ದಿನಗಳಲ್ಲಿ ಒಬ್ಬರೇ ಮಾಡಬೇಕಾಗಬಹುದು. ಇಂತಹ  ಕೌಶಲ್ಯ ಪ್ರತಿಭೆಗಳನ್ನು ಸುದ್ದಿ ಸಂಸ್ಥೆಗಳು ಅರಸುತ್ತಿವೆ. ಹೀಗಾಗಿ ಇದಕ್ಕೆ ತಕ್ಕಂತೆ ಪತ್ರಿಕೋದ್ಯಮ ಮತ್ತು ಯುವ ಪೀಳಿಗೆಯ ಪತ್ರಕರ್ತರು ಸಜ್ಜಾಗಬೇಕಿದೆ. ಸಜ್ಜುಗೊಳ್ಳಲು ಬೇಕಾದ ತರಬೇತಿಯನ್ನು ಪತ್ರಕರ್ತರ ಕೂಟಗಳು, ಸಂಘಗಳು ನೀಡಬೇಕಾಗುತ್ತದೆ ಎಂದು ಆಶಿಸಿದರು. 

ತಂತ್ರಜ್ಞಾನದ ವೇಗಕ್ಕೆ ಪತ್ರಿಕೋದ್ಯಮ ಸಿಲುಕಿದ್ದರೂ ಪತ್ರಿಕಾ ವೃತ್ತಿಯ ಪ್ರಾಥಮಿಕ ಮತ್ತು ಮೂಲಭೂತ ಕಾಳಜಿ ಅದೇ ಇದೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಯ ಕಾಳಜಿ ಮತ್ತು ಜವಾಬ್ದಾರಿ ಈಗಲೂ ಪತ್ರಕರ್ತರ ಮೂಲಭೂತ ಕರ್ತವ್ಯವೇ ಆಗಿದೆ ಎಂದರು. 

ವಿರಕ್ತ ಮಠದ ಬಸವ ಪ್ರಭು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು‌ ಸಂಘದ ಜಿಲ್ಲಾಧ್ಯಕ್ಷರಾದ ವಹಿಸಿದ್ದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಮಂಜುನಾಥ್, ದಾವಣಗೆರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಕಣಸೋಗಿ  ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.