Tuesday, August 1, 2023
ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಸ್ವಸ್ಥ ಬದುಕಿಗಾಗಿ ದುಶ್ಚಟಗಳಿಂದ ದೂರವಿರಲು ಯುಜನಾಂಗಕ್ಕೆ ಕರೆ
ಈ ದಿವಸ ವಾರ್ತೆ
ವಿಜಯಪುರ : ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವು ನಮ್ಮ ಗುರಿಯಾಗಿದೆ. ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿದಾಯಕವಾಗಿದೆ. ಮಾದಕವೆಂಬ ವಿಷ ಮನುಕುಲದಲ್ಲಿ ಯುವ ಸಮುದಾಯ ನಲುಗುತ್ತಿದೆ. ವ್ಯಸನಕ್ಕೆ ಒಳಗಾಗಿ ಸುಂದರ ಬದುಕನ್ನು ವ್ಯರ್ಥಮಾಡಿಕೊಳ್ಳದೇ ಸ್ವಾಸ್ಥ ಸುಂದರ ಬದುಕು ರೂಪಿಸುವತ್ತ ಯುವಜನಾಂಗ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಆಯೋಜಿಸಿರುವ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲ್ನಡಿಗೆಯಲ್ಲಿ ಊರೂರು ತಿರುಗಾಡಿ ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಡಾ.ಮಹಾಂತ ಶಿವಯೋಗಿಗಳು ಶ್ರಮಿಸಿದ್ದರು. ಡಾ. ಮಹಾಂತಶಿವಯೋಗಿಗಳ ಜನ್ಮದಿನವಾದ ಆಗಸ್ಟ್ 1ಅನ್ನು ವ್ಯಸನ ಮುಕ್ತ ದಿನವನ್ನಾಗಿ ಸರ್ಕಾರ ಆಚರಿಸುತ್ತಿದೆ.
ಯುವ ಜನತೆ ವ್ಯಸನಗಳಿಂದ ಮುಕ್ತವಾಗಲು ಪಣ ತೊಡಬೇಕಿದೆ. ಇಂತಹ ಆಚರಣೆಗಳ ಮೂಲಕ ಸಂತ-ಮಹಾಂತರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಶಿಸ್ತು-ಬದ್ಧ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಮನೋರೋಗ ತಜ್ಞರಾದ ಡಾ.ಮಂಜುನಾಥ ಮಸಳಿ ಅವರು ಮಾತನಾಡಿ, ವ್ಯಸನ ಮುಕ್ತ ಜೀವನ ನಡೆಸುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವುದು ಅತ್ಯವಶ್ಯಕವಾಗಿರುವುದರಿಂದ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ನಿರಂತರ ಯೋಗ, ವ್ಯಾಯಾಮ ಸೇರಿದಂತೆ ಉತ್ತಮ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಅವರು ಮಾತನಾಡಿ, ಶಿಸ್ತು, ಪ್ರಾಮಾಣಿಕತೆ, ಆಜ್ಞಾಧಾರಕತೆ, ಸುಗುಣಶೀಲತೆ, ಸತತ ಪ್ರಯತ್ನ, ನಿರಂತರ ಓದು ಹಾಗೂ ಗುರುಭಕ್ತಿಯನ್ನು ಜೀವನದಲ್ಲಿ ಇಂದಿನ ಪೀಳಿಗೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಗಮನ ಸೆಳೆದ ರಂಗೋಲಿ : ಇಂದು ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಮಂಜುಳಾ, ಪ್ರಶಿಕ್ಷಣಾರ್ಥಿ ಶುಲಕ್ಷ್ಮಿ ಹೊಸಮನಿ ಅವರು ಗಾಂಧಿ ಭವನದ ಪ್ರವೇಶ ದ್ವಾರದಲ್ಲಿ ಬಿಡಿಸಿದ ರಂಗು- ರಂಗಿನ ರಂಗೋಲಿ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ವೀರೇಶ ವಾಲಿ ತಂಡದವರಿಂದ ಗಾಯನ ಪ್ರಸ್ತುತಪಡಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಮತಿ ಅನುಸೂಯಾ ಕೆ.ಚಲವಾದಿ, ನಿವೃತ್ತ ಶಿಕ್ಷಕ ಹುಮಾಯೂನ ಮಮದಾಪುರ, ಜಗಜ್ಯೋತಿ ಬಸವೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶೇಬಾನಿ ಹಾಗೂ ಕಾಲೇಜಿನ 80 ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Monday, July 31, 2023
ಕಿರು ಚಲನಚಿತ್ರದ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ ದಸಾಪ : ಡಾ ಅರ್ಜುನ ಗೊಳಸಂಗಿ
ವಿಜಯಪುರ: ಪುಸ್ತಕ ಪ್ರಕಾಶನ, ಸಾಹಿತ್ಯ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ದಲಿತ ಸಾಹಿತ್ಯ ಪರಿಷತ್ತು ರಾಮಸಾಹೇಬಾ ಕಿರು ಚಲನಚಿತ್ರದ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ ಎಂದು ದಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ ಅರ್ಜುನ ಗೊಳಸಂಗಿ ಅವರು ಹೇಳಿದರು.
ಚಿತ್ರದಲ್ಲಿ ಬರುವ ಅಂಬೇಡ್ಕರ್ ಅವರ ಜೀವನದಲ್ಲಿ ಬರುವ ಕಷ್ಟದ ಘಟನೆಗಳಿಗೆ ನೋಡುಗರ ಕಣ್ಣಲ್ಲಿ ನೀರು ತುಂಬಿ ಬಂದಿದ್ದು ಕಂಡು ಬಂತು. ಈ ಸಂಧರ್ಭದಲ್ಲಿ ದಸಾಪ ರಾಜ್ಯ ಘಟಕದ ಪದಾಧಿಕಾರಿಗಳಾದ ಡಾ ಎಚ್ ಬಿ ಕೋಲ್ಕಾರ ಸುಭಾಷ ಹುದ್ಲೂರ, ವೈ ಎಂ ಭಜಂತ್ರಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.
Sunday, July 30, 2023
ದಲಿತ ಸಾಹಿತ್ಯ ಹೆಚ್ಚಾಗಿ ಇಂದು ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆಯಿದೆ: ಮೂಡ್ನಾಕೂಡು ಚಿನ್ನಸ್ವಾಮಿ
ಈ ದಿವಸ ವಾರ್ತೆ
ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ :ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಂಟಪ, ಕುಮಾರ ಕಕ್ಕಯ್ಯ ಪೋಳ ವೇದಿಕೆ :25ವರ್ಷಗಳ ಕಾಲ ಒಂದು ದಲಿತ ಸಾಹಿತ್ಯ ಪರಿಷತ್ತು ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ಬೆಳಸಿ ಉಳಸಿಕೊಂಡು ಬರುವುದು ಕಷ್ಟದ ಕೆಲಸ ಇಂತಹ ಕೆಲಸ ನಿರಂತರವಾಗಿ ಮಾಡುತ್ತಿರುವ ರಾಜ್ಯಾಧ್ಯಕ್ಷ ಡಾ ಅರ್ಜುನ ಗೊಳಸಂಗಿ ಅವರ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹೇಳಿದರು. ಅವರು ವಿಜಯಪುರದ ರಂಗಮಂದಿರದಲ್ಲಿ ಜುಲೈ 29 ಮತ್ತು 30 ರಂದು ಎರಡು ದಿನಗಳ ಕಾಲ ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬೆಳ್ಳಿ ಸಂಭ್ರಮ ನಿಮಿತ್ಯ ನಡೆಯುತ್ತಿರುವ ಅಖಿಲ ಭಾರತ 10ನೇ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಸಾಪ ಬೆಳ್ಳಿ ಸಂಭ್ರಮ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ದಲಿತ ಸಾಹಿತ್ಯ ಹೆಚ್ಚಾಗಿ ಇಂದು ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಆಗಬೇಕಾದ ಅವಶ್ಯಕತೆಯಿದೆ, ಒಂದು ಸಾವಿರ ವರ್ಷ ಮೊಗಲರು ಭಾರತ ಆಳ್ವಿಕೆಯನ್ನು ವೈದಿಕರು ಸಹಿಸಿಕೊಂಡರು ಆದರೆ 150 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು ಸಹಿಸಲಿಲ್ಲ ಏಕೆಂದರೆ ಅವರು ಭಾರತದ ಕಂದಾಚಾರಗಳನ್ನು ವಿರೋಧಿಸಿದ್ದೇ ಅದಕ್ಕೆ ಕಾರಣ ದಲಿತರಿಗೆ ಅಕ್ಷರ ಮಾತ್ರವಲ್ಲ ಅನ್ನ ನೀರು ಕೊಡದೆ ಪೀಡಿಸಿದಂತಹ ವರ್ಗದವರು ಸಮಾಜ ಸುಧಾರಣೆ ಕಾನೂನುಗಳನ್ನು ವಿರೋಧಿಸಿದರು ಆದರೆ ಅಂಬೇಡ್ಕರ್ ಅವರ ಪ್ರಯತ್ನದಿಂದ ಅದು ಸಾಧ್ಯವಾಯಿತು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಡಾ ಗವಿಸಿದ್ದಪ್ಪ ಪಾಟೀಲ ಅವರು ಮಾತನಾಡಿ ದಲಿತ ಸಾಹಿತ್ಯ ಪರಿಷತ್ತು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ನಾಡಿನ ಎಲ್ಲರನ್ನು ಒಳಗೊಳ್ಳುವ ಮೂಲಕ ಮಾದರಿ ಕಾರ್ಯ ಮಾಡುತ್ತಿದೆ ಎಂದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತೆ ಸೌಜನ್ಯ ಕರಡೋಣಿ ಅವರು ಮಾತನಾಡಿದರು ಜೊತೆಗೆ ಸಮ್ಮೇಳನ ಅಧ್ಯಕ್ಷರಿಗೆ ಹಾಗೂ ಗಣ್ಯರಿಗೆ ತಮ್ಮ ಕಲಾಕೃತಿಗಳನ್ನು ನೀಡಿ ಗೌರವಿಸಿದರು. ಮತ್ತೋರ್ವ ಪ್ರಶಸ್ತಿ ಪುರಸ್ಕೃತೆ ಮುರ್ತುಜಾ ಬೇಗಂ ಕೊಡಗಲಿ ಅವರು ಮಾತನಾಡಿ ಹಳ್ಳಿಗಳಲ್ಲಿ ಬೇರೂರಿರುವ ಅಸಮಾನತೆಯನ್ನು ತೊಲಗಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತರಾದ ರೇಣುಕಾ ಹೆಳವರ ಮುಳ್ಳೂರು ಶಿವಮಲ್ಲು, ಡಾ ಹೊಂಬಯ್ಯ ಹೊನ್ನಲಗೆರೆ,ಸ್ವಪ್ನ ಬುಕ್ ಹೌಸ್ ನ ದೊಡ್ಡೇಗೌಡ, ಡಾ ಎಂ ಬಿ ಕಟ್ಟಿ, ಗಣಪತಿ ಚಲವಾದಿ ಅವರು ಮಾತನಾಡಿದರು.
ಗೌರವ ಪ್ರಶಸ್ತಿಗೆ ಭಾಜನರಾದ ವಿವಿಧ ಕ್ಷೇತ್ರದ ಸಾಧಕರಾದ ಆರ್. ದೊಡ್ಡಗೌಡ ಬೆಂಗಳೂರು (ಸಾಹಿತ್ಯ), ವೀರಹನುಮಾನ ರಾಯಚೂರು (ಸಾಹಿತ್ಯ), ಶ್ರೀಶೈಲ ನಾಗರಾಳ ಕಲಬುರ್ಗಿ (ಸಾಹಿತ್ಯ), ಡಾ. ಗವಿಸಿದ್ದಪ್ಪ ಪಾಟೀಲ ಹುಮ್ನಾಬಾದ (ಸಾಹಿತ್ಯ), ಶ್ರೀಮತಿ ಮುರ್ತುಜಾ ಬೇಗಂ ಕೊಡಗಲಿ ಇಲಕಲ್ಲ (ಸಾಹಿತ್ಯ), ಹಾರೋಹಳ್ಳಿ ರವೀಂದ್ರ ಮೈಸೂರು (ಸಾಹಿತ್ಯ), ಪರಶುರಾಮ ಶಿವಶರಣ ವಿಜಯಪುರ (ಸಾಹಿತ್ಯ), ನರೇಂದ್ರ ನಾಗವಾಲ ಮೈಸೂರು (ಸಮಾಜಸೇವೆ) ,ಮುಳ್ಳೂರ ಶಿವಮಲ್ಲು ಚಾಮರಾಜನಗರ (ದಲಿತ ಚಳುವಳಿ), ಡಾ. ಸಂಜೀವಕುಮಾರ ಮಾಲಗತ್ತಿ ಧಾರವಾಡ (ಪತ್ರಿಕಾರಂಗ), ರಾಜು ವಿಜಯಪುರ ಹುಬ್ಬಳ್ಳಿ (ಪತ್ರಿಕಾರಂಗ), ಕು. ಸೌಜನ್ಯ ಕರಡೋಣಿ ಧಾರವಾಡ (ಚಿತ್ರಕಲೆ), ಸಿ. ಆರ್. ನಟರಾಜ ಕೋಲಾರ (ಸಂಗೀತ), ದೇವು ಕೆ, ಅಂಬಿಗ ವಿಜಯಪುರ (ಸಿನೆಮಾ) ಅವರಿಗೆ ಬೆಳ್ಳಿ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಬಿಡಲೋಟಿ ರಂಗನಾಥ್, ಡಾ ಸದಾಶಿವ ದೊಡಮನಿ, ಡಾ ಶಾಂತನಾಯ್ಕ ಶಿರಾಗಾನಹಳ್ಳಿ, ರೇಣುಕಾ ಹೆಳವರ, ಪಿ ಆರ್ ಡಿ ಮಲ್ಲಯ್ಯ ಕಟ್ಟೇರ, ಡಾ ಪ್ರಸನ್ನ ನಂಜಾಪುರ, ಡಾ ಗಿರೀಶ ಮೂಗ್ತಿಹಳ್ಳಿ, ಪ್ರಭುಲಿಂಗ ನೀಲೂರೆ, ಗೌಡಗೆರೆ ಮಾಯುಶ್ರೀ, ಡಾ ಎಚ್ ಡಿ ಉಮಾಶಂಕರ, ಸೋಮಲಿಂಗ ಗೆಣ್ಣೂರ, ಡಾ ಎಂ ಬಿ ಕಟ್ಟಿ, ಡಾ ಹೊಂಬಯ್ಯ ಹೊನ್ನಲೆಗೆರೆ, ಡಾ ಅಮರೇಶ ಯತಗಲ್, ಡಾ ಪೂರ್ಣಿಮಾ, ರಾಯಸಾಬ ದರ್ಗಾದವರ ಅವರಿಗೆ ವಾರ್ಷಿಕ ವಿವಿಧ ದತ್ತಿ ಹಾಗೂ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದರು.
ಅದರಂತೆ ಸಂಘಟನೆಯಲ್ಲಿ ತೊಡಗಿಸಿಕೊಂಡ ವಿಭಾಗೀಯ ಸಂಯೋಜಕರ ಗಣಪತಿ ಚಲವಾದಿ, ರಾಯಚೂರು ದಸಾಪ ಜಿಲ್ಲಾಧ್ಯಕ್ಷ ತಾಯರಾಜ್ ಮಚಟಹಾಳ, ತಾಲೂಕಾ ಅಧ್ಯಕ್ಷರಾದ ಹುಸೇನಪ್ಪ ಅಮರಾಪೂರ ಅವರಿಗೆ ದಸಾಪ ಅತ್ಯುತ್ತಮ ಸಂಘಟಕ ಸಾಧಕರಶ್ರೀ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ವಾಧ್ಯಕ್ಷರಾದ ಪ್ರೊ ಎಚ್.ಟಿ.ಪೋತೆ, ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಖಂಜಾಂಚಿ ಡಾ. ಎಚ್. ಬಿ. ಕೋಲ್ಕಾರ, ಕಾರ್ಯದರ್ಶಿ ಸುಭಾಷ ಹುದ್ಲೂರು , ಉಪಾಧ್ಯಕ್ಷ ಡಾ.ವೈ.ಎಂ.ಭಜಂತ್ರಿ, ಸಂಯೋಜಕ ಬಸವರಾಜ ಜಾಲವಾದಿ, ಪ್ರಧಾನ ಸಂಯೋಜಕ ಶ್ರೀನಾಥ ಪೂಜಾರ, ಸಹ ಸಂಯೋಜಕ ಉಮೇಶ ಶಿವಶರಣ, ದಸಾಪ ತಾಲೂಕಾ ಅಧ್ಯಕ್ಷೆ ಡಾ. ಪೂರ್ಣಿಮಾ ಧಾಮಣ್ಣನವರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ ಇದ್ದರು. ಡಾ ಚಂದ್ರಗುಪ್ತ ಅವರು ಕಾರ್ಯಕ್ರಮ ಸಂಯೋಜಿಸಿದರು. ಅಶ್ವಿನಿ ಮದನಕರ ಸ್ವಾಗತಿಸಿದರು, ಎಂ ಬಿ ಕಟ್ಟಿಮನಿ ಹಾಗೂ ರುಕ್ಮಿಣಿ ನಾಗಣ್ಣವರ ನಿರೂಪಿಸಿದರು ಪದ್ಮಾವತಿ ಯಾತಗಲ್ಲ ವಂದಿಸಿದರು.







