Monday, October 4, 2021

ಸಿಂದಗಿಯ ಉಪ ಚುನಾವಣೆ :ಪ್ರಚಾರ ಸಾಮಗ್ರಿ ಮುದ್ರಿಸಲು ಘೋಷಣಾ ಪತ್ರ ಸಲ್ಲಿಕೆ ಕಡ್ಡಾಯ



ಈ ದಿವಸ ವಾರ್ತೆ

ವಿಜಯಪುರ :ಸಿಂದಗಿ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ  ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರಗಳ ಬಗ್ಗೆ ಕಡ್ಡಾಯವಾಗಿ ಡಿಕ್ಲರೇಷನ್(ಘೋಷಣಾ ಪತ್ರ) ಸಲ್ಲಿಸುವಂತೆ ಮುದ್ರಕರಿಗೆ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿಜಯಪುರ ನಗರದ ವಿವಿಧ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿದ ಅವರು ಪ್ರಜಾಪ್ರತಿನಿಧಿ ಕಾಯ್ದೆ 1951 ರ 127(A) ರನ್ವಯ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಮತ್ತು ಪೋಸ್ಟರ ಮುದ್ರಣ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುದ್ರಕರಿಗೆ ಅವರು ಸೂಚಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಮುದ್ರಿಸುವ ಪಾಂಪ್ಲೆಟ್ ಪೋಸ್ಟರ್ ಗಳಿಗೆ ಕಡ್ಡಾಯವಾಗಿ ಮುದ್ರಕರ ಹೆಸರು,ವಿಳಾಸ ಹಾಗೂ ಪ್ರಕಟಿಸುವ ಪಾಂಪ್ಲೆಟ್ ಹಾಗೂ ಪೋಸ್ಟರ್ ಗಳ ಸಂಖ್ಯೆಯನ್ನು ನಮೂದಿಸಬೇಕು.

ಅದರಂತೆ ಮುದ್ರಕರಿಗೆ ಮುದ್ರಣ ಮಾಡಲು ನೀಡುವಂತಹ ಪಾಂಪ್ಲೆಟ್ ಮತ್ತು ಪೋಸ್ಟರ್ ಗಳಿಗೆ ಸಂಬಂಧಪಟ್ಟ ವ್ಯಕ್ತಿಯು ಕಡ್ಡಾಯವಾಗಿ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿ ಮುದ್ರಕರಿಗೆ ಸಲ್ಲಿಸಬೇಕು ಮುದ್ರಕರು ಸಹ ಈ ಕುರಿತು ಘೋಷಣಾ ಪತ್ರ ಸಲ್ಲಿಸಬೇಕು.

ಅದರಂತೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಹಾಗೂ ಘೋಷಣಾ ಪ್ರಮಾಣ ಪತ್ರವನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುದ್ರಕರು ಜಿಲ್ಲೆಯ ವಿವಿಧ ತಾಲೂಕುಗಳ ಮುದ್ರಕರು ಮತ್ತು ಜಿಲ್ಲೆಗೆ ಹೊಂದಿಕೊಂಡಿರುವ ಮುದ್ರಣಾಲಯದ ಮುದ್ರಕರು ಸಹ ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಹೇಳಿದರು.

 ವಿಜಯಪುರ ನಗರದ ಮುದ್ರಣಾಲಯ ಸಂಘದ ಅಧ್ಯಕ್ಷರು ಕೂಡ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮುದ್ರಣಾಲಯಗಳ ಮುದ್ರಕರಿಗೆ ಪತ್ರದ ಮೂಲಕ ಚುನಾವಣಾ ಆಯೋಗದ ನಿರ್ದೇಶನದ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಅವಶ್ಯಕ ಕ್ರಮಕೈಗೊಳ್ಳಲು ಅವರು ಸೂಚನೆ ನೀಡಿ ಒಟ್ಟಾರೆ ನೀತಿ ಸಂಹಿತೆ ಉಲ್ ಲಂಘನೆಯಾಗದಂತೆ  ನೋಡಿಕೊಳ್ಳಲು ಸೂಚಿಸಿದರು.

ಸಿಂದಗಿ ವಿಧಾನಸಭಾ ಚುನಾವಣೆ ಅಧಿಕಾರಿಗಳ ಮೂಲಕವೂ ಆ ಕ್ಷೇತ್ರದ ವ್ಯಾಪ್ತಿಯ ಮುದ್ರಣಾಲಯದ ಮುದ್ರಕರೊಂದಿಗೆ ಸಭೆ ನಡೆಸಿ ಈ ಕುರಿತು ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ,ಡಾ ಔದ್ರಾಮ ಸೇರಿದಂತೆ ವಿವಿಧ ಮುದ್ರಣಾಲಯಗಳ ಮುದ್ರಕರು ಉಪಸ್ಥಿತರಿದ್ದರು.

05-10-2021 EE DIVASA KANNADA DAILY NEWS PAPER

Saturday, October 2, 2021

03-10-2021 EE DIVASA KANNADA DAILY NEWS PAPER

ಅಸ್ಪೃಶ್ಯತೆ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ





 ಈ ದಿವಸ ವಾರ್ತೆ

ವಿಜಯಪುರ: ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಮಹತ್ತರವಾದ ಕನಸಿನಂತೆ, “ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು” ಎನ್ನುವ ಭಾರತದ ಸಂವಿಧಾನದ ಆಶಯದಂತೆ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಭದ್ರ ಭಾರತ ದೇಶ ಆಗಬೇಕಾದರೆ ಜಾತಿಭೇದ, ಜಾತಿವೈಷಮ್ಯ ಇಲ್ಲದಂತಾಗಬೇಕು. ಅಸ್ಪೃಶ್ಯತೆ ಎನ್ನುವುದು ನಮ್ಮ ಸಮಾಜಕ್ಕೆ ಅಂಟಿದ ಶಾಪ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಶ್ರೀ.ರಾಮನಗೌಡ ಕನ್ನೊಳಿ ಅವರು ಹೇಳಿದರು.

ನಗರದ ತೋರವಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕ ಪಂಚಾಯತ, ತಿಕೋಟಾ ಗ್ರಾಮ ಪಂಚಾಯತ ಕಾರ್ಯಾಲಯ, ತೊರವಿ,

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಲ್ಲಿ ಮಾತನಾಡಿದರು

 “ಮಾನವ ಕುಲಂ ತಾನೊಂದೆ ವಲಂ' ಎನ್ನುವ ಆದಿಕವಿ ಪಂಪನ ಸಂದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಕೊಟ್ಯಂತರ ಅನುದಾನ ಭರಿಸಿ ಅನುಷ್ಟಾನಗೊಳಿಸುತ್ತಿದೆ. ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಇನ್ನೂ ನಮ್ಮ ಸಮಾಜದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದುರಂತಮಯ. ಜಾತಿ-ಜಾತಿಗಳ ಮಧ್ಯೆ, ಮೇಲ್ವಾತಿ-ಕೆಳಜಾತಿ ಎನ್ನುವ ಹೆಸರಿನಲ್ಲಿ, ಆಚರಣೆಗಳ ನೆಪದಲ್ಲಿ, ಅಸ್ಪೃಶ್ಯತೆ ಪಾಲಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ತಂದಿವೆ ಎಂದು ಹೇಳಿದರು.

    ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989, 2015, ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-1955, ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ ನೇಮಕಾತಿ ನಿಷೇಧ ಅಧಿನಿಯಮ-2013, ಈ  ಕಾನೂನುಗಳ ಪ್ರಕಾರ ಜಾತಿ ಭೇಧ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾನೂನು ಪ್ರಕಾರ ಇಂತಹ ಅನಿಷ್ಟ ಆಚರಣೆ ಮಾಡುವವರಿಗೆ, ಪ್ರೋತ್ಸಾಹ ನೀಡುವವರಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.

    ಜಾತಿ ನಿಂದನೆ ಮಾಡುವುದು, ಧಾರ್ಮಿಕ ಕ್ಷೇತ್ರ, ಪೂಜಾ ಸ್ಥಳಗಳಲ್ಲಿ ಪ್ರವೇಶ ತಡೆಯುವುದು, ಯಾವುದೇ ಧಾರ್ಮಿಕ ಸೇವೆ ಮಾಡುವುದು, ಯಾವುದೇ ಕೆರೆ, ಬಾವಿ, ಕೊಳವೆಬಾವಿ, ಬಳಕೆ ಮಾಡುವುದು ಹಾಗೂ ಈ ಜಾಗಗಳಲ್ಲಿ ಸ್ನಾನ ಮಾಡುವುದು ಹಾಗೂ ನೀರನ್ನು ಉಪಯೋಗಿಸುವುದಕ್ಕೆ ಅಡ್ಡಿಯುಂಟು ಮಾಡುವುದು. ತರವಲ್ಲದ ಕೆಲಸಕ್ಕೆ ಜಾತಿ ಆಧಾರದ ಮೇಲೆ ಒತ್ತಾಯ ಮಾಡಿದಲ್ಲಿ ಹಾಗೂ ಒತ್ತಾಯದ ಮೇರೆಗೆ ಯಾವುದೇ ಕೆಲಸಕ್ಕೆ ತೊಡಗಿಸಿದಲ್ಲಿ. * ಯಾವುದೇ ಅಂಗಡಿ, ಸಾರ್ವಜನಿಕ ಉಪಹಾರ ಗೃಹ, ಹೊಟೇಲ, ಸಾರ್ವಜನಿಕ ಮನೋರಂಜನಾ ಸ್ಥಳ, ಸಲೂನ್ (ಹೇರ್‌ಕಟಿಂಗ್) ಪ್ರವೇಶಕ್ಕೆ/ಬಳಕೆಗೆ ಅಡ್ಡಿ ಮಾಡಬಾರದು ಎಂದು ಅವರು ಹೇಳಿದರು.

   ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವುದರ ಬಗ್ಗೆ ಅಡ್ಡಿಯುಂಟು ಮಾಡುವುದು  ಸ್ಮಶಾನ ಅಥವಾ ಸುಡುಗಾಡಿನ, ಯಾವುದೇ ಸಾರ್ವಜನಿಕ ಶೌಚಾಲಯದ, ಯಾವುದೇ ರಸ್ತೆಗೆ ಸಾರ್ವಜನಿಕರು ಉಪಯೋಗಿಸಲು ಅಥವಾ ಪ್ರವೇಶಿಸಲು ಹಕ್ಕನ್ನು ಹೊಂದಿರುವ ಇತರೆ ಯಾವುದೆ ಸ್ಥಳದ ಉಪಯೋಗದ ಬಗ್ಗೆ ಅಡ್ಡಿಯುಂಟು ಮಾಡುವುದು. ಯಾವುದೇ ಸಾರ್ವಜನಿಕ ಅಥವಾ ಧಾರ್ಮಿಕ ರೂಢಿ, ಪದ್ದತಿ ಅಥವಾ ಉತ್ಸವದ ಆಚರಣೆಯ ಬಗ್ಗೆ ಅಥವಾ ಯಾವುದೇ ಧಾರ್ಮಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸುವುದು ಅಡ್ಡಿಯುಂಟು ಮಾಡುವುದು. ಈ ಮೇಲಿನ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ಮೇಲೆ ಕಾನೂನು ಪ್ರಕಾರ 6 ತಿಂಗಳವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲು  ಅವಕಾಶವಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ರವರ ಕನಸಿನ ಸಮ ಸಮಾಜವನ್ನು ಕಟ್ಟೋಣ; ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸೋಣ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗಾಂಧಿಜಿಯವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ತಿಳಿಸಿರುವ ಸಂದೇಶದ ಬಗ್ಗೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ಅಸ್ಪೃಶ್ಯತೆ ಆಚರಣೆ ವಿರೋಧದ ಕಾನೂನಿನ ಅರಿವು ಮೂಡಿಸಲಾಯಿತು.

 ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.  ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸುರೇಶ್ ಕಳ್ಳಿಮನಿ, ದಲಿತ ಮುಖಂಡ ಅಡಿವೆಪ್ಪ ಸಾಲಗಲ್,ದಾದಾಸಾಬ ಬಾಗಾಯತ್,ಲಾಲಪ್ಪ ಗುಡಿಮನಿ, ಹನುಮಂತ ಪಟ್ಟೇದ, ಶಾಂತಿನಗರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ  ಸುರೇಶಗೌಡ ಬಿರಾದಾರ, ಸಿದ್ಧಾರ್ಥ ಪರಣಾಕರ, ಸುರೇಶ್ ಗಚ್ಚಿನಮನಿ ಹಾಗೂ ಇತರರು ಉಪಸ್ಥಿತರಿದ್ದರು.

Monday, September 27, 2021

ವಿಜಯಪುರ ರಫ್ತು ನಗರ ಮಾಡುವ ಗುರಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ

 



ಈ ದಿವಸ ವಾರ್ತೆ ವಿಜಯಪುರ: ವಿಜಯಪುರ ವನ್ನು ರಫ್ತು ನಗರವನ್ನಾಗಿಸುವ ಗುರಿ ಹೊಂದಲಾಗಿದ್ದು, ಇಲ್ಲಿನ ಉದ್ದಿಮೆಗಳು ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ, ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಆಶ್ರಯದಲ್ಲಿ ಆಝಾದಿ ಕಾ ಅಮೃತ ಮಹೋತ್ಸ ನಿಮಿತ್ತ  ಸೋಮವಾರ ಹಮ್ಮಿಕೊಂಡ ವಾಣಿಜ್ಯ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪಕ್ಕದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ ಸೇರಿದಂತೆ ಗಡಿ ಭಾಗದ ಸೊಲ್ಲಾಪುರ ಕೂಡ ರಫ್ತು ಮಾಡುವಲ್ಲಿ ವಿಜಯಪುರಕ್ಕಿಂತಲೂ ಮುಂದಿನ ಹೆಜ್ಜೆಯಲ್ಲಿವೆ. ಆದರೆ ನಮ್ಮ ಜಿಲ್ಲೆಯಿಂದ ಮಾತ್ರ ಈ ಕಾರ್ಯ ಸಾಧನೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದರು.

ಸದ್ಯ ಒಣ ದ್ರಾಕ್ಷಿ, ದಾಳಿಂಬೆ, ಲಿಂಬೆ ಸೇರಿದಂತೆ ವಾಣಿಜ್ಯ ಬೆಳೆಗಳು ಮಾತ್ರ ರಫ್ತು ಮಾಡಲಾಗುತ್ತಿದ್ದು, ಕೈಗಾರಿಕೆಯ ವಸ್ತುಗಳು ಕೂಡ ರಫ್ತು ಮಾಡುವ ನಿಟ್ಟಿನಲ್ಲಿ, ಕೈಗಾರಿಕೋದ್ಯಮಿಗಳು ತಮ್ಮ ವಸ್ತುಗಳನ್ನು ಉತ್ತಮ ಗುಣಮಟ್ಟದಲ್ಲಿ ಉತ್ಪಾದಿಸಲು ಮುಂದಾಗಬೇಕು. ಇದಕ್ಕೆ ಕೈಗಾರಿಕೋದ್ಯಮಿಗಳ ಶ್ರಮ ಹೆಚ್ಚಿದೆ ಎಂದರು.

ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇಂದು ವಿಪುಲ ಅವಕಾಶಗಳಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು.

ಇಲ್ಲಿ ಮುಳವಾಡ ಹಾಗೂ ಸಿಂದಗಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡೆಸಲಾಗುತ್ತಿದೆ. ಜಿಲ್ಲೆಯ ನವ ಉದ್ಯಮೆದಾರರಿಗೆ ಇಲ್ಲಿನ ಕೈಗಾರಿಕಾ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಭಾಗದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಗೊಂಡು, ಉದ್ಯೋಗ ಸೃಜನೆಗೊಂಡಲ್ಲಿ, ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲು ಸಾಧ್ಯೆ ಎಂದರು.

ಜಿಲ್ಲೆಯ ಕೃಷಿ ಉತ್ಪಾನ್ನ ಸೇರಿದಂತೆ ಕೈಗಾರಿಕಾ ವಸ್ತುಗಳ ರಫ್ತು ಮಾಡಲು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಏರ್ ಬಸ್, ಕಾರ್ಗೋ ಹಾರಾಟದ ವ್ಯವಸ್ಥೆಗೆ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದರು.

ಅಮೃತ ಯೋಜನೆ ನಿಮಿತ್ತ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಇಲಾಖೆಗಳ ಆಶ್ರಯದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಳಗಳಲಾಗುತ್ತಿದೆ ಎಂದರು.

ಇಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿ ಬಸವರಾಜ ಬಿರಾದಾರ ಕೈಗಾರಿಕೆಗಳ ನಿವೇಶನ ಹಂಚಿಕೆ ಹಾಗೂ ಕೈಗಾರಿಕೆ ಬೆಳವಣಿಗೆಯ ನಿಟ್ಟಿನಲ್ಲಿ ಪೂರಕವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ರಫ್ತು ಮಾಡುವ ಗುಣಮಟ್ಟದ ವಸ್ತುಗಳು ಹೆಚ್ಚಿದ್ದು, ಇನ್ನಷ್ಟು ಬೆಳವಣಿಗೆ ಆಗಬೇಕು ಎಂದರು.

ಅಲ್ಲದ ಕೈಗಾರಿಕೆ ಸ್ಥಾಪನೆಗಳಿಗೆ ಸರ್ಕಾರ ಸರಳಿಕೃತ ನೀತಿ ಜಾರಿಗೆ ತಂದಿದ್ದು, ಈ ಹಿಂದಿನ ಅಡೆ, ತಡೆಗಳನ್ನು ತಗೆದು ಹಾಕಿದೆ. ಹೀಗಾಗಿ ಇಂದು ಕೈಗಾರಿಕಾ ಸ್ಥಾಪನೆಗೆ ಉತ್ತಮ ಅವಕಾಶಗಳು ಇವೆ ಎಂದರು.

ಹಿರಿಯ ಉದ್ಯಮ, ಚೇಂಬರ್ ಆಫ್ ಕಾಮರ್ಸ್ ಇಂಡಿಸ್ಟ್ರೀ, ಅಗ್ರಿಕಲ್ಚರ್ ಅಧ್ಯಕ್ಷ ಡಿ.ಎಸ್. ಗುಡ್ಡೋಡಗಿ ಮಾತನಾಡಿದರು.

ಸಣ್ಣ ಉದ್ಯಮಿದಾರರ ಸಂಘದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ತಮಣ್ಣ ಈಳಗೇರ, ಟಿ.ಸಿ. ವಿಜಯಬಾಸ್ಕರ್ ಮತ್ತಿತರರು ಇದ್ದರು.

ಸಿಡಾಕ್ ಜಂಟಿ ನಿರ್ದೇಶಕಿ ಎಸ್.ಬಿ. ಬಳ್ಳಾರಿ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ ವಂದಿಸಿದರು.