Friday, January 2, 2026

ವಿಜಯಪುರದಲ್ಲಿ ಪೂಜ್ಯ ಸ್ವಾಮೀಜಿಗಳ ಜೊತೆ ಪೊಲೀಸರ ವರ್ತನೆ ಖಂಡನಾರ್ಹ: ಕೇಶವ ಪ್ರಸಾದ್

 

ಈ ದಿವಸ ವಾರ್ತೆ

ವಿಜಯಪುರ: ವಿಜಯಪುರ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ 106 ದಿನ ಹಾಗೂ ಅಹೋರಾತ್ರಿ ಧರಣಿಗೆ 17 ದಿನವಾಗಿದೆ. ಈ ಹೋರಾಟ ಶಾಂತ ರೀತಿಯಲ್ಲಿ ನಡೆಯುತ್ತಿದ್ದು ಈ ಹೋರಾಟಕ್ಕೆ ಜೆಲ್ಲೆಯಾದ್ಯಂತ  ಪಕ್ಷಾತೀತ, ಜಾತ್ಯಾತೀತ ಬೆಂಬಲ ವ್ಯಕ್ತವಾಗಿದೆ. ಜನವರಿ 9 ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗಮನ ಸೆಳೆಯಲು ಹೋರಾಟದ ತೀವ್ರತೆ ಹೆಚ್ಚಿದೆ. ಇದೇ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನಾಕಾರರು ಧರಣಿಗೆ ಮುಂದಾಗಿದ್ದಾರೆ. ಈ ಸಂದರ್ಭಲ್ಲಿ ಹುಣಿಶ್ಯಾಳ ಗ್ರಾಮದ ಶ್ರೀ ಸಂಗನಬಸವ ಸ್ವಾಮೀಜಿ ಅವರ ಮೈಮೇಲಿನ ಬಟ್ಟೆ ಹಿಡಿದು ಎಳೆದೊಯ್ಯಲು ಯತ್ನಿಸಿದ್ದು ಪೊಲೀಸರ ಅತಿರೇಕದ ವರ್ತನೆ ಎಂದು ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರು ಖಂಡಿಸಿದ್ದಾರೆ.

ಪ್ರತಿಭಟನಾಕಾರರ ಮನವೊಲಿಸಿ ಹೋರಾಟ ನಿಯಂತ್ರಿಸದೇ ಏಕಾಏಕಿ ಹೋರಾಟಗಾರರ ಮೇಲೆ ಬಲ ಪ್ರಯೋಗ ಮಾಡಿರುವುದು ತೀವ್ರ ಕಳವಳದ ಸಂಗತಿ. ಪೂಜ್ಯ ಸ್ವಾಮೀಜಿಗಳ ಜೊತೆ ಪೊಲೀಸರ ಈ ವರ್ತನೆ ಖಂಡನಾರ್ಹ ಎಂದು ಅವರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಪೂಜ್ಯ ಸ್ವಾಮೀಜಿಗಳನ್ನು ಹಾಗೂ ಹೋರಾಟಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ನ್ಯಾಯಸಮ್ಮತವಲ್ಲ. ಪ್ರತಿಭಟನೆ ಜನರ ಮೂಲಭೂತ ಹಕ್ಕು. ಈ ಹೋರಾಟಗಾರರು ಆಸ್ತಿ ನಷ್ಟಮಾಡಿ, ಬೆಂಕಿ ಹಚ್ಚಿ, ಕಲ್ಲು ತೂರಿ ಪ್ರತಿಭಟನೆ ಮಾಡುತ್ತಿರಲಿಲ್ಲ, ಇಂಥಹ ಸಂದರ್ಭದಲ್ಲಿ ಜಿಲ್ಲಾ ಪೊಲೀಸರು ತೀವ್ರ ಕ್ರಮಕ್ಕೆ ಮುಂದಾಗಿರುವುದು ಖಂಡನಾರ್ಹ ಎಂದಿದ್ದಾರೆ.

ಈ ಅಚಾತುರ್ಯ  ಘಟನೆಗೆ ಕಾರಣರಾದ ಸಂಬಂಧಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಹಠ ಬಿಟ್ಟು ಪ್ರತಿಭಟನಾಕಾರರ ಜೊತೆ ಮಾತನಾಡಿ, ಅವರು ಸರಕಾರಿ ವೈದ್ಯಕೀಯ ಕಾಲೇಜನ್ನು ಖಂಡಿತ ಮಾಡುವೆ ಎಂದು ನೀಡಿರುವ ಆಶ್ವಾಸನೆಯನ್ನು ಪುನರುಚ್ಚರಿಸಿ ಪರಿಸ್ಥಿತಿ ಶಾಂತಗೊಳಿಸಲಿ ಎಂದು ಆಗ್ರಹಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Wednesday, December 31, 2025

ಸಚಿವರ ನಿವಾಸದ ಎದುರು ಪ್ರತಿಭಟನೆ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರ ಬಂಧನ

ವಿಜಯಪುರ : ಜಿಲ್ಲೆಗೆ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಗುರುವಾರ 106ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆ, ಹೊಸ ವರ್ಷದಂದೂ ನಗರದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭ ಪೊಲೀಸರು ಹೋರಾಟಗಾರರನ್ನು ಬಂಧಿಸಿ ವಾಹನದಲ್ಲಿ ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಗೆ ಕರೆದೊಯ್ದಿರುವ ಘಟನೆ ನಡೆದಿದೆ.

ಹೋರಾಟಗಾರರು ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಹೋರಾಟಗಾರರು ಸರ್ಕಾರಕ್ಕೆ ಧಿಕ್ಕಾರ.. ಧಿಕ್ಕಾರ.., ಸರ್ಕಾರಿ ವೈದ್ಯಕೀಯ ಕಾಲೇಜು ಹೊರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುತ್ತಿರುವ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಸಂಗನ ಬಸವೇಶ್ವರ ಶ್ರೀಗಳು, ಹೋರಾಟಗಾರರಾದ ಅರವಿಂದ ಕುಲಕರ್ಣಿ, ಸುರೇಖಾ ರಜಪೂತ, ಅನಿಲ ಹೊಸಮನಿ, ಭಿ. ಭಗವಾನ ರೆಡ್ಡಿ, ಸಿದ್ಧರಾಮ ಹಳ್ಳೂರ, ಜಗದೇವ ಸೂರ್ಯವಂಶಿ, ಮಲ್ಲಿಕಾರ್ಜುನ ಎಚ್. ಟಿ, ಗಿರೀಶ ಕಲಘಟಗಿ, ವಿನೋದ ಖೇಡ, ಮಲ್ಲಿಕಾರ್ಜುನ ಬಟಗಿ, ಅಕ್ರಮ ಮಾಶ್ಯಾಳಕರ, ಲಲಿತಾ ಬಿಜ್ಜರಗಿ, ಲಾಯಪ್ಪ ಇಂಗಳೆ, ಭೋಗೇಶ ಸೋಲಾಪುರ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್., ಶಿವಬಾಳಮ್ಮ ಕೊಂಡಗೂಳಿ ಇದ್ದರು.