Tuesday, January 2, 2024
ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ನಮನ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ದಿವಸ ವಾರ್ತೆ
ವಿಜಯಪುರ ಜ 2 : ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ. ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದೇಶ್ವರ ಸ್ವಾಮೀಜಿಗಳಿಗೆ ಗುರುನಮನ ಸಲ್ಲಿಸಿದರು.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಇವತ್ತಿಗೂ-ಯಾವತ್ತಿಗೂ ಬಸವಾದಿ ಶರಣರ ಅನುಯಾಯಿ. ಸಿದ್ದೇಶ್ವರ ಸ್ವಾಮೀಜಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗ ರಹಿತ ಸಮ ಸಮಾಜಕ್ಕಾಗಿ ಶ್ರಮಿಸಿದವರು ಎಂದು ತಮ್ಮ ಒಳಹನ್ನು ತೆರೆದಿಟ್ಟರು.
ಸಿದ್ದೇಶ್ವರ ಸ್ವಾಮಿಗಳು ಜ್ಞಾನ ಸಂಪಾದಿಸಿದರು. ಆ ಜ್ಞಾನವನ್ನು ಜನಮಾನಸಕ್ಕೆ ಹಂಚಿದರು. ದ್ವೇಷ, ಅಹಂಕಾರದಿಂದ ಬಿಡುಗಡೆ ಹೊಂದಿದ ಅತ್ಯುನ್ನತ ಮನುಷ್ಯತ್ವದ ಸೃಷ್ಟಿಗೆ ಶ್ರಮಿಸಿದವರು. ಇವರ ಬದುಕು ಮತ್ತು ಸಾಧನೆಯನ್ನು ವರ್ಣಿಸಲು ಪದಗಳೇ ಇಲ್ಲ. ಅಷ್ಟು ಸರಳತೆ ಅವರ ಬದುಕು ಮತ್ತು ವ್ಯಕ್ತಿತ್ವದಲ್ಲಿ ಬೆರೆತಿತ್ತು ಎಂದು ವಿವರಿಸಿದರು.
ಧರ್ಮಾತೀತವಾಗಿ ಪ್ರತಿಯೊಬ್ಬರೂ ಬಾಳಬೇಕು ಎನ್ನುವುದು ಸಿದ್ದೇಶ್ವರ ಸ್ವಾಮಿಗಳ ಆಶಯವಾಗಿತ್ತು. ಸಮಾಜದ ಜಾತಿ ಮೈಲಿಗೆಯನ್ನು ಸೋಕಿಸಿಕೊಳ್ಳದೆ ದೂರ ಉಳಿದಿದ್ದ ದಾರ್ಶಕನಿಕರು. ಸಮಾಜದಲ್ಲಿ ದೂರದರ್ಶಿತ್ವ ಇಟ್ಟುಕೊಂಡು ಮನುಷ್ಯ ಸಮಾಜವನ್ನು ತಿದ್ದುವ ಗುರಿ ಹೊಂದಿದ್ದ ಕಾರಣಕ್ಕೇ ಇವರು ದಾರ್ಶನಿಕರಾಗಿದ್ದರು ಎಂದು ವಿವರಿಸಿದರು.
ಜಿಲ್ಲೆಯ ಸಚಿವರು ಮತ್ತು ಸಂತರು ಹೇಳಿದ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳ ಬದುಕಿನ ಸಂದೇಶ ಮತ್ತು ಆದರ್ಶಗಳನ್ನು ಕಾಪಾಡುವ ಸ್ಮರಣಾರ್ಥ ಕಾರ್ಯ ಮಾಡಲು ಸರ್ಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.
ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ ಸಲ್ಲಿಸುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ನನಗೆ ವಿಶೇಷ ಗೌರವ ಮತ್ತು ಪ್ರೀತಿ.
ಸಿದ್ದಗಿರಿ ಕನ್ನೇರಿಮಠ ಕೊಲ್ಲಾಪುರದ ಅದೃಶ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಸಿರಿಗಿರೆಯ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಶಿವಮೂರ್ತಿ ಶಿವಾಚಾರ್ಯ ಮಹಾ ಶ್ರೀಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿಗಳು ಮತ್ತು ಹಲವು ಸಿದ್ದ ಸಂತರ ಸಾನ್ನಿಧ್ಯದಲ್ಲಿ ಲಕ್ಷಾಂತರ ಅನುಯಾಯಿಗಳ ಸಮ್ಮುಖದಲ್ಲಿ ಗುರುನಮನ ಕಾರ್ಯಕ್ರಮ ಉದ್ಘಾಟನೆಯಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಸಚಿವರಾದ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಮಾಜಿ ಸಚಿವರಾದ ಶಾಸಕ ವಿನಯ್ ಕುಲಕರ್ಣಿ ಮತ್ತು ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ್ ಮನಗೋಳಿ ಸೇರಿ ಹಲವು ಪ್ರಮುಖರು ಗುರುನಮನಕ್ಕೆ ಸಾಕ್ಷಿಯಾದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Monday, January 1, 2024
ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ:
ಬೆಂಗಳೂರು 01: ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಹಾಗೂ ಜಕಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ಎಲ್ಲರಿಗೂ ತಿಳಿಯಬೇಕು. ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ಚರಿತ್ರಾರ್ಹ ವ್ಯಕ್ತಿಗಳ ಅಧ್ಯಯನ ವಾಗಬೇಕು ಎಂದರು.
ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕು:
ಅಮರಾಶಿಲ್ಪಿ ಜಕಣಾಚಾರಿ ಸಂಸ್ಮರಣೆ 2019 ರಲ್ಲಿ ಪ್ರಾರಂಭವಾದರೂ ಕೋವಿಡ್ ಇದ್ದುದರಿಂದ ಆಚರಿಸಲಾಗಲಿಲ್ಲ. ಕಳೆದ ವರ್ಷ ವಿಜಯನಗರ ಜಿಲ್ಲೆಯಲ್ಲಿ ಆಚರಿಸಲಾಗಿತ್ತು ಎಂದರು.
ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿನಲ್ಲಿಯೇ ಆಚರಿಸಬೇಕೆಂದು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಲಾಗುತ್ತದೆ ಎಂದರು.
ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು:
ಜಕಣಾಚಾರಿ ಇಡೀ ರಾಜ್ಯಕ್ಕೆ ಗೊತ್ತಿರುವವರು. ಅವರ ಕಾಲ್ಪನಿಕ ವ್ಯಕ್ತಿ ಎನ್ನುವುದು ಸುಳ್ಳು. ಜಕಣಾಚಾರಿ ವಿಶ್ವಕರ್ಮ ಸಮಾಜದಲ್ಲಿ ಹುಟ್ಟಿದವರು. ಅವರು ಬೆಳೆದ ಎತ್ತರ ಜನರಿಗೆ ತಿಳಿಯಬಾರದೆಂದು ಇತಿಹಾಸ ತಿರುಚುವ ಪ್ರಯತ್ನ ಮಾಡಲಾಗಿದೆ.
ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡಿದ್ದರೂ ಮಾಡಿರಬಹುದು. ಅಮರ ಶಿಲ್ಪಿ ಜಕಣಾಚಾರಿ ಇತಿಹಾಸ ನಮ್ಮ ಮುಂದಿದೆ ಎಂದರು.
ವಿಶ್ವಕರ್ಮ ಅಭಿವೃದ್ಧಿ ನಿಗಮ, ವಿಶ್ವಕರ್ಮ ಜಯಂತಿಯನ್ನು ಆಚರಿಸುವ ತೀರ್ಮಾನ ನಮ್ಮ ಸರ್ಕಾರವೇ ಹಿಂದೆ ಮಾಡಿತ್ತು ಎಂದು ಸ್ಮರಿಸಿದರು.
ಜಾತ್ಯಾತೀತ ಸಮಸಮಾಜ ನಿರ್ಮಾಣ:
ನಮ್ಮ ಸಂವಿಧಾನ ಜಾತಿ ರಹಿತ, ವರ್ಗರಹಿತ, ಜಾತ್ಯಾತೀತ ಸಮಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದೆ. ಸ್ವಾರ್ಥಕ್ಕಾಗಿ ಸಮಾಜದಲ್ಲಿ ಅಸಮಾನತೆ ಉಂಟಾಗಿದೆ. ಶತಶತಮಾನಗಳಿಂದ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಅಸಮಾನತೆಗೆ ಬಲಿಯಾಗಿರುವ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಿ ಅವರು ಮುಖ್ಯವಾಹಿನಿಗೆ ಸೇರುವಂತಾಗಬೇಕು. ಎಲ್ಲರಿಗೂ ಅವಕಾಶ ಒದಗಿಸುವುದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ ಎಂದರು.
ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು:
ಚಲನಶೀಲತೆ ಇಲ್ಲದ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿಯೇ ಸಂವಿಧಾನದ ಪೀಠಿಕೆವನ್ನು ಓದಿ ಅರ್ಥಮಾಡಿಕೊಂಡು ಅದರಂತೆ ನಡೆಯಬೇಕು. ಸಂವಿಧಾನದ ವಿರೋಧಿಗಳು ಸಮಾಜದಲ್ಲಿ ಬದಲಾವಣೆ ಬಯಸುವುದಿಲ್ಲ. ಸಂವಿಧಾನದ ಆಶಯಗಳನ್ನು ಈಡೇರಿಸಬೇಕು. ಇದಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನಾಲ್ಕು ಶಿಲ್ಪಿಗಳಿಗೆ ಜಕಣಾಚಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಾಸನದ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠಾಧಿಪತಿ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಸೇರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



