Monday, August 21, 2023

ಅಧ್ಯಯನ ಮತ್ತು ಸಂಶೋಧನೆಗಳು ಗ್ರಂಥಾಲಯಗಳಲ್ಲಿ ಕೊಳೆಯಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿವಿಗಳು ಉನ್ನತ ಶಿಕ್ಷಣವನ್ನು, ಜ್ಞಾನವನ್ನು ಯುವಕ-ಯುವತಿಯರಿಗೆ ಒದಗಿಸುವ ಜೊತೆಗೆ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಮೂಡಿಸಬೇಕು

ಶಿಕ್ಷಣ ಅಂದರೆ ಕೇವಲ ಓದುಬರಹ ಕಲಿಯುವುದಲ್ಲ. ಸಾಮಾಜಿಕ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ನೀಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಒಬ್ಬ ವ್ಯಕ್ತಿ ವಿವಿಯಿಂದ ಹೊರಗೆ ಬಂದ ಮೇಲೆ ಸಮಾಜದ ಜವಾಬ್ದಾರಿ ಹೊರುವ ಶಕ್ತಿ ಇರಬೇಕು. ಅಂತಹ ಜ್ಞಾನ ಬರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಜೊತೆ ರಾಜಿ ಮಾಡಿಕೊಂಡು ಹೋಗುವುದಾದರೆ ಅದು ಶಿಕ್ಷಣವೇ ಅಲ್ಲ



ಬೆಂಗಳೂರು : ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗಬಾರದು. ಅದಕ್ಕೆ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪುನರ್‌ ವಿಮರ್ಶೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕುಲಪತಿಗಳ ಮತ್ತು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 

 ಬೇರೆ ಬೇರೆ ಭಾಷೆ, ಸಂಸ್ಕೃತಿ ಮತ್ತಿತರ ಅಂಶಗಳ ಕಾರಣದಿಂದ ನಮ್ಮ ದೇಶದಲ್ಲಿ ಏಕ ಶಿಕ್ಷಣ ಪದ್ಧತಿ ಸಾಧ್ಯವಿಲ್ಲ. ಕುಲಪತಿಗಳು ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಭಾವಿಸಿದ್ದೇನೆ.

 ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿದ್ದಾಗ ಮಾತ್ರ ದೇಶದಲ್ಲಿ ಸಮಾನತೆ ಸಾಧ್ಯ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ. ಈ ಸಮ ಸಮಾಜ ನಿರ್ಮಾಣ ಮಾಡುವ ಸಾಮರ್ಥ್ಯವನ್ನು ನಾವು ವಿವಿಗಳ ಮೂಲಕ ಕೊಡಬೇಕು ಎಂದರು. 

ಸಂವಿಧಾನಕ್ಕೆ ವಿರುದ್ಧವಾದ ಚಟುವಟಿಕೆ ಮತ್ತು ಕ್ರಮಗಳು ವಿವಿಗಳಲ್ಲಿ ನಡೆಯಬಾರದು. ವಿವಿಗಳಿಂದ ಬಂದವರು ಮತ್ತೆ ಮೌಢ್ಯಗಳು, ಜಾತಿಯ ಜೊತೆಯಲ್ಲಿದ್ದರೆ ಅವರು ಪಡೆದಿರುವುದು ಶಿಕ್ಷಣ ಎಂದು ಕರೆಯಲಾಗದು. ವಿವಿಗಳಲ್ಲಿ ಧರ್ಮ ನಿರಪೇಕ್ಷತೆ, ಮೌಢ್ಯ ರಹಿತ, ಕಂದಾಚಾರ ರಹಿತ ಹಾಗೂ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಶಿಕ್ಷಣ ನೀಡಬೇಕು.  ಕೆಲವೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಕರ್ತೃಗಳು, ಸಾಮಾಜಿಕ ಚಿಂತಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಭೆ, ಸಮಾರಂಭಗಳನ್ನು ನಡೆಸಿರುವುದನ್ನು ಕೆಲವು ವಿವಿಗಳಲ್ಲಿ ನೋಡಿದ್ದೇನೆ. ಜಾತ್ಯತೀತ ವಿರೋಧಿ ಮನೋಭಾವವನ್ನು ಪುರಸ್ಕರಿಸಬಾರದು. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಕಾರಣಕ್ಕೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಇಲ್ಲವಾದರೆ ಉನ್ನತ ಶಿಕ್ಷಣ ಸರಿದಾರಿಯಲ್ಲಿ ಸಾಗದೆ ಹೋದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದರು. 

 ಅತಿಥಿ ಉಪನ್ಯಾಸಕರ ನೇಮಕದ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳನ್ನು ನೇಮಕ ಮಾಡಕೂಡದು. 

ವಿವಿಯ ವಿದ್ಯಾರ್ಥಿಗಳು ಮನುಷ್ಯತ್ವ ಇರುವ ವ್ಯಕ್ತಿಗಳಾಗಿ ಬೆಳೆಯಬೇಕು. ಹುಟ್ಟುವಾಗ ಎಲ್ಲರೂ ವಿಶ್ವಮಾನವರು, ಬೆಳೆಯುತ್ತಾ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದಂತೆ ಆಗಬಾರದು ಎಂದರು. 

ಸಾಕಷ್ಟು ಕೊರತೆಗಳನ್ನು ಇಟ್ಟುಕೊಂಡು ಜಿಲ್ಲೆಗೊಂದು ವಿವಿ ಮಾಡುವ ತೀರ್ಮಾನ ಸರಿಯಲ್ಲ.  ಮೂಲಸೌಲಭ್ಯ ಒದಗಿಸಲಾಗದಿದ್ದರೆ ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಶೇ. 3 ಕ್ಕಿಂತ ಹೆಚ್ಚು ಅನುದಾನ ಒದಗಿಸಲಾಗಿತ್ತು. ಮುಂದಿನ ವರ್ಷದಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು.

 ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ಯಾವುದೇ ಲೋಪವಾಗಬಾರದು. ಒಂದೇ ಬಾರಿ ಎಲ್ಲ ಪರಿಹಾರ ಒದಗಿಸಲಾಗದು. ಆದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದರು. 

ಸಂಶೋಧನೆಯ ಫಲ ಗ್ರಂಥಾಲಯಗಳಲ್ಲಿ ಉಳಿಯಬಾರದು. ಸಮಾಜವನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆ ಫಲಪ್ರದವಾಗುವುದು ಎಂದರು.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್,  ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ , ಆರ್ಥಿಕ ಇಲಾಖೆ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರ ಹಿರಿಯ ಅಧಿಕಾರಿಗಳು, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳ ಹಬ್ಬ ಪಂಚಮಿ ಹಬ್ಬ

ಈ ದಿವಸ ವಿಶೇಷ ವರದಿ

ಹಬ್ಬವೆಂದರೆ ಎಲ್ಲರಿಗೂ ಇಷ್ಟ ಅದರ ಸಡಗರ ಮನೆಯಲ್ಲಿ ತುಂಬಾ ಜೋರಾಗಿರುತ್ತದೆ ಇದು ಪಂಚಮಿ ಎಂದರೆ ಹೆಣ್ಣು ಮಕ್ಕಳಾಚರಿಸುವ ಒಂದು ಪ್ರಮುಖವಾದ ಹಬ್ಬ ಶ್ರಾವಣ ಮಾಸದ ಮೊದಲ ಹಬ್ಬ ಇದಾಗಿದೆ. ಒಂದು ವಾರಕ್ಕೆ ಮೊದಲೇ ಮನೆಯಲ್ಲಿ  ಸಿಹಿ ತಯಾರಿಸಲು ಪ್ರಾರಂಭ ಮಾಡಿರುತ್ತಾರೆ ಎಲ್ಲಾ ತರಹದ ಉಂಡೆಗಳು ನಾಗರ ಪಂಚಮಿ ಪೂಜೆ ಸಲುವಾಗಿ ಮಾಡುತ್ತಾರೆ.

ಮುಂಗಾರಿನ ಮಳೆಯ ಆದನಂತರ ಬರುವ ಮೊದಲ ಹಬ್ಬ ಇದಾಗಿದೆ ಸುಂದರವಾಗಿ ಅಲಂಕಾರವನ್ನು ಮಾಡಿಕೊಂಡು ಮನೆಯ ತುಂಬಾ ಓಡಾಡುವುದು ಹೆಣ್ಣು ಮಕ್ಕಳು ಅವರಿಂದಲೇ ಒಂದು ಕಳೆ ಬರುತ್ತದೆ ಈ ಹಬ್ಬಕ್ಕೆ ನಾಗದೇವನಿಗೆ ಹಾಲೆರೆಯುವುದು  ನೈವಿದ್ಯ ಸಹ ತೆಗೆದುಕೊಂಡು ಹೋಗುತ್ತಾರೆ ಹಳ್ಳಿಯ ಕಡೆ ಗೆಳತಿಯರು ಎಲ್ಲಾ ಸೇರಿಕೊಂಡು ಯಾರ ಮನೆಯ ಮುಂದೆ ಜೋಕಾಲಿ ಇದ್ದ ಕಡೆ ಅಲ್ಲಿ ಹೋಗಿ ಆಟವನ್ನು ಆಡುತ್ತಾ ಯಾವುದೇ ಭೇದ ಭಾವ ಇಲ್ಲದೆ ಎರಡು ದಿನಗಳ ಕಾಲ ಆಚರಿಸುತ್ತಾರೆ.

ಹಿಟ್ಟು ಅಥವಾ ಉಂಡಿ ತಿನ್ನುವ ದಿನವೆಂದು ಹಳ್ಳಿ ಕಡೆ ಆಚರಣೆಯನ್ನು ಮಾಡುತ್ತಾರೆ ಎಲ್ಲರೂ ತಮ್ಮ ತಮ್ಮ ಮನೆ ಪಕ್ಕದವರ ಮನೆಗೆ ಹೋಗಿ ತುಂಟಾಟ ಮಾಡುತ್ತಾ ಉಂಡಿ‌ತಿಂದು ಹೋಗುತ್ತಾರೆ ನಾಗಗಳನ್ನು ಪೂಜಿಸುವ ಹಬ್ಬ ಇದಾಗಿದೆ ಏಕೆಂದರೆ ಅವುಗಳ ಮೇಲೆ ಅಪಾರವಾದ ನಂಬಿಕೆ ಭಕ್ತಿಯನ್ನು ಇಟ್ಟುಕೊಂಡ ಜನರು ಯಾವುದೇ ರೀತಿಯಲ್ಲಿ ತೊಂದರೆ ಸಮಸ್ಯೆ ಕುಟುಂಬದಲ್ಲಿ ಬರಬಾರದೆಂದು ಬೇಡಿಕೊಳ್ಳುತ್ತಾರೆ  ಪೂಜಿಸುತ್ತಾರೆ ಹಾಲು ಎರೆಯುವ ಮೂಲಕ ಮೂಲಕ ಭಕ್ತಿಯಿಂದ ಪೂಜಿಸುತ್ತಾರೆ ಇದರಲ್ಲೇ ಪ್ರಮುಖ ಪಾತ್ರ ಮಹಿಳೆಯರು   ಮನೆಯ ಒಳತಿನ ಸಲವಾಗಿ ಉಪವಾಸವನ್ನು ಸಹಿತ ಮಾಡುತ್ತಾರೆ.

ತಮ್ಮ ಎಲ್ಲಾ ಕಷ್ಟಗಳು ನಾಗದೇವರು ದೂರವಾಗುತ್ತದೆ  ಎಂದು ಖುಷಿಯಿಂದ ಗೆಳತಿಯರ ಜೊತೆ ಹರಟೆಯನ್ನು ಹೊಡೆಯುತ್ತಾರೆ ಮತ್ತು ಗಂಡು ಮಕ್ಕಳು ಸಹಿತ  ಈ ಹಬ್ಬವನ್ನು ಆಚರಿಸುತ್ತಾರೆ ಏಕೆಂದರೆ ಅವರು ನಿಂಬೆಕಾಯಿ ಎಸೆತ ದಷ್ಟು ದೂರ ಹೋಗಬೇಕು  ಪಂದ್ಯ ಎಷ್ಟು ಸಮಯದ ವರೆಗೆ ಜೋಕಾಲಿ‌ ಆಡುತ್ತಾರೆ ಗೆದ್ದು ತುಂಬಾ ಸಂಭ್ರಮಾಚರಣೆಯಿಂದ ಯಾವುದೇ ಬೇಧ ಭಾವವಿಲ್ಲದೆ ಜೋಕಾಲಿಯನ್ನು ಆಡುತ್ತಾರೆ. ಉಂಡೆಗಳನ್ನು ತಿನ್ನುತ್ತಾ ಮಜಾ ಮಾಡುವುದೇ ಈ ಹಬ್ಬ ಪ್ರಮುಖವಾಗಿ ಅನ್ನ ತಂಗಿಯ ಬಂಧ ಬೇಸೆಯುವ  ಹಬ್ಬದ ನಂತರ ಕೊಬ್ಬರಿ  ಕುಬಸ  ತಂಗಿಯ ಮನೆಗೆ ಕೊಟ್ಟು ಕಳುಹಿಸುತ್ತಾರೆ ತಮ್ಮ ಬಂದು ಮಿತ್ರರಿಗೆ ಎಲ್ಲರಿಗೂ ಕೊಡುತ್ತಾರೆ   ಎಲ್ಲಾರೂ  ಒಂದೇ ಎನ್ನುವ ಮನೋಭಾವದಿಂದ ಆಚರಿಸುವ ಪಂಚಮಿ ಹಬ್ಬ ಎಂದೆನಿಸಿಕೊಳ್ಳುತ್ತದೆ

ಚೇತನಾ‌ ಶ್ರೀ ಬೆಳ್ಳೆನವರ, ಕಲಬೀಳಗಿ

Thursday, August 17, 2023

18-08-2023 EE DIVASA KANNADA DAILY NEWS PAPER

ಮುರುಗೇಶ ನಿರಾಣಿ ದಲಿತ ವಿರೋಧಿ ಕೈಗಾರಿಕಾ ಮಾಜಿ ಸಚಿವ: ಶ್ರೀನಿವಾಸನ ಆರೋಪ

 

ವಿಜಯಪುರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸ ಮಾತನಾಡಿದರು.

ಈ ದಿವಸ ವಾರ್ತೆ
ವಿಜಯಪುರ: ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು, ದಲಿತ ವಿರೋಧಿ ಸಚಿವರಾಗಿದ್ದರು ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಎ. ಶ್ರೀನಿವಾಸನ್ ಆರೋಪಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾಗಿದ್ದ ಸಂದರ್ಭ, ದಲಿತರಿಗೆ ಬಹಳಷ್ಟು ವಂಚಿಸಿದ್ದು, ಕೆಐಎಡಿಬಿಯ ನಿವೇಶನ ಹಂಚಿಕೆಯ ಕಮಿಟಿಯಲ್ಲಿ ದಲಿತರಿಗೆ ಇಟ್ಟಿದ್ದ ಜಾಗವನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದು ಸರಿಯಲ್ಲ. ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ಇಟ್ಟಿದ್ದ 675 ಎಕರೆ ಜಮೀನನ್ನು ಬೇರೆಯವರಿಗೆ ನೀಡಿದ್ದಾರೆ. ಈ ಬಗ್ಗೆ ಮುರುಗೇಶ ನಿರಾಣಿಯವರ ಗಮನಕ್ಕೆ ತಂದರೂ ಅಂದು ಅವರು ಬಗೆಹರಿಸುವ ಪ್ರಯತ್ನವನ್ನು ಮಾಡಲಿಲ್ಲ. ಇದು ಅವರ ದಲಿತ ವಿರೋಧಿ ನೀತಿಯಾಗಿದೆ. ಈ ಅಕ್ರಮವನ್ನು ದಾಖಲೆ ಸಮೇತ ನಾನು ಸಾಬೀತು ಪಡಿಸುವೆ. ಅಲ್ಲದೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯಗಳು ಇವೆ ಎಂದರು.
ಕೆಐಎಡಿಬಿಯ ನಿವೇಶನ ಹಂಚಿಕೆಯಲ್ಲಿ ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿರುವ ಕುರಿತು ಸದ್ಯ ಸರ್ಕಾರದ ಗಮನಕ್ಕೆ ತಂದಿರುವೆ. ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.
ಇನ್ನು ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಯ ದಲಿತ ಉದ್ದಿಮೆದಾರರ ಸಂಘದ ಜಿಲ್ಲಾ ಘಟಕಗಳ ಅಡಿಯಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಭೇಟಿಯಾಗಿ ಮನವಿ ಮಾಡಲಾಗಿದ್ದು, ಅವರು ಸಮಾವೇಶಕ್ಕೆ ಆಗಮಿಸಲು ಒಪ್ಪಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ನಗರದಲ್ಲಿ ದಲಿತ ಉದ್ದಿಮೆದಾರರ ಐತಿಹಾಸಿಕ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆದಾರರು ಹೆಚ್ಚಿದ್ದು, ಈ ನಿಟ್ಟಿನಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿಯೂ ಜವಳಿ ಕ್ಷೇತ್ರದ ದಲಿತ ಕೈಗಾರಿಕಾ ಉದ್ದಿಮಿಗಳ ಬೃಹತ್ ಸಮಾವೇಶ ಕೂಡಾ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಜವಳಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೂ ಭೇಟಿ ಮಾಡಿ ಮನವಿ ಮಾಡಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಅಧಿಕಾರಿ ರಾಜಶೇಖರ ಯಡಿಹಳ್ಳಿ ಇದ್ದರು.