Saturday, July 18, 2020

ನಡೆದಾಡುವ ದೇವರು



ಗೊಮ್ಮಟಕ್ಕೂ ಎತ್ತರದ
ತತ್ವಜ್ಞಾನದ ಮೇರುಶಿಖರ. 
ಕೃಷ್ಣೆಗೂ ಮಿಗಿಲಾದ 
ಜ್ಞಾನದ ಸಾಗರ. 

ಸ್ವಚ್ಛ ಬಿಳುಪಿನೊಳಗೆ
ಶಾಂತಮೂರ್ತಿ. 
ಶುಭ್ರ ಹೊಳಪಿನೊಳಗೆ 
ಸಹಜಕೀರ್ತಿ. 

ಅರಸಿ ಬಂದ ಪದ್ಮವ 
ತ್ಯಾಗ ಮಾಡಿದ ತ್ಯಾಗಿ. 
ಹರಸಿಬಂದ ಆಸೆಗಳೆಲ್ಲವ
ದೂರ ಮಾಡಿದ ಯೋಗಿ

ಬಂಧನದ ಭವದೊಳಗೆ
ಮುಕ್ತಿಯ ಓಂಕಾರ.
ಆಡಂಬರದ ಜಗದೊಳಗೆ
ಸರಳತೆಯ ಜೇಂಕಾರ. 

ಹೇಳುತಿರೆ ಮೃದು ಸ್ವರದಿ 
ಅನುಭವ'ದ ಅನುಭಾವ. 
ಹೊಳೆಯುವುದು ಮನದಿ 
ಅನಂತತೆಯ ಅನುಭವ.

ನುಡಿ-ನುಡಿಗೂ  ಹೂವೆಂದ
ಹೂವಂತ ಮನದವರು.
ನಡೆ-ನುಡಿ ಸಮವೆಂದ
ನಡೆದಾಡುವ ದೇವರು.

ಅಂಬರೀಷ ಎಸ್. ಪೂಜಾರಿ. 

Friday, July 17, 2020

18-07-2020 EE DIVASA KANNADA DAILY NEWS PAPER

ಕೋರೋನಾವನ್ನು ತಡೆಗಟ್ಟಲು ವಿದ್ಯಾರ್ಥಿಗಳು ವಾರಿಯರ್ಸ್ ಮಾದರಿಯಲ್ಲಿ ಶ್ರಮಿಸಬೇಕಿದೆ ಕೆ.ಎನ್. ರಮೇಶ


ಈ ದಿವಸ ವಾರ್ತೆ
ವಿಜಯಪುರ: ಜಗತ್ತನೆ ಕಾಡುತ್ತಿರುವ ಕೊರೋನ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ಇದನ್ನು ತಗ್ಗಿಸಲು ವಿದ್ಯಾರ್ಥಿಗಳು ವಾರಿಯರ್ಸ್ ಮಾದರಿಯಲ್ಲಿ ಶ್ರಮಿಸಬೇಕಿದೆ ಎಂದು ವಿಜಯಪುರ ಜಿಲ್ಲೆಯ ವಿಜಯವಾಣಿ, ಕನ್ನಡ ದಿನಪತ್ರಿಕೆಯ ಸ್ಥಾನಿಕ ಸಂಪಾದಕರು, ರಮೇಶ ಕೆ ಎನ್ ಹೇಳಿದರು.
ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ  ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಿಜಯಪುರ ಮತ್ತು ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ (ದರಬಾರ) ಮಹಾವಿದ್ಯಾಲಯ, ವಿಜಯಪುರ, ಇವರ ಸಹಯೋಗದಲ್ಲಿ ಕೋವಿಡ್ 19 ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಅಂತರ್ಜಾಲ ಸಂವಾದ ಕರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇತನಕ ಸರಿಸುಮಾರಿ ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾಗಿ ಬಲಿಯಾಗಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ದೇಶದಲ್ಲಿ ಸೆಪ್ಟೆಂಬರ್ ವೇಳೆಗೆ 35 ಲಕ್ಷಕ್ಕೂ ಅಧಿಕ ಮತ್ತು ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕರೋನಾ ವೈರಸ್ ನಿಯಂತ್ರಣಕ್ಕೆ ಸರಕಾರಗಳು, ವೈದ್ಯರ ಜೊತೆಗೆ  ಸಮಾಜದ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ. ಇಂದಿನ ಯುವ ಪೀಳಿಗೆ ಅದರಲ್ಲೂ ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ಚಿಂತನೆ ಮಾಡುವ ಅವಶ್ಯಕತೆ ಅಧಿಕವಾಗಿದೆ. ಮೊದಲನೆಯದಾಗಿ ಯಾರಿಗೂ ಕರೋನಾ ವೈರಸ್ ಹರಡದಂತೆ ಎಚ್ಚರಕೆ ವಹಿಸುವ ಅವಶ್ಯಕತೆ ಹೆಚ್ಚಿದೆ. ಸ್ವಚ್ಛತೆ, ಮುಖಗವಸು ಬಳಸುವುದು, ಕಣ್ಣು, ಬಾಯಿ, ಮೂಗನ್ನು ಮುಟ್ಟಿಕೊಳ್ಳುವ ಸಂದರ್ಭ ಬಂದಾಗ ಕೈಯನ್ನು ಸೋಪಿನಿಂದ ಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.  ಬಿಸಿ ನೀರು ಸೇವನೆ, ಸಮಾಜಿಕ ಅಂತರ ಪಾಲನೆ ಹಲವು ವಿಷಯಗಳ ಬಗ್ಗೆ ಇತರರಿಗೆ ಸಾಧ್ಯವಾದಷ್ಟು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಕುಮಾರಿ ಸುಶ್ಮಾ ನಾಯಕ, ಸಂಶೋಧನಾ ವಿದ್ಯಾರ್ಥಿ, ವಿಜಯಪುರ ಇವರು ಸಹ ಮಾತಾನಾಡಿದರು.
ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿಸಿಎ ಮಹಾವಿದ್ಯಾಲಯ, ವಿಜಯಪುರದ ಪ್ರಾಚಾರ್ಯರಾದ ಗಿರೀಶ್ ಎಂ ಮಣ್ಣೂರ, ಅಧ್ಯಕ್ಷೀಯ ಭಾಷಣ ಮಾಡಿದರು.
ಉಪನ್ಯಾಸಕರಾದ ಮಂಜುನಾಥ ಜನಗೊಂಡ, ಅರುಣ್ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಜಿ ತುಕಾರಾಮಗೌಡ ಪ್ರಾಸ್ತಾವಕವಾಗಿ ಮಾತನಾಡಿದರು.
ಸಿ ಕೆ ಸುರೇಶ್ ಸ್ವಾಗತಿಸಿ ವಂದಿಸಿದರು.

Wednesday, July 15, 2020

16-07-2020 EE DIVASA KANNADA DAILY NEWS PAPER

ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ


ಈ ದಿವಸ ವಾರ್ತೆ
ವಿಜಯಪುರ : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭಣಗೊಳ್ಳುತ್ತಿರುವುದಕ್ಕೆ ಕಾರಣವಾಗುತ್ತಿದೆ. ಈ ಕಾಣದಿಂದಾಗಿ ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ವರಿ ಗೋಲಗೆರಿ ಅವರು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಜನಸಂಖ್ಯಾ ಸ್ಥಿತಿಗತಿ ಹಾಗೂ ಕುಟುಂಬ ಕಲ್ಯಾಣ ಸೇವೆಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳದ ಪರಿಣಾಮ ನಾವು ಹಾಗೂ ನಮ್ಮ ಮುಂದಿನ ತಲೆಮಾರುಗಳು ಹೆಚ್ಚಿನ ತೊಂದರೆಗಳನ್ನು ಅನುಭವಿಸುವಂತಾಗಿದೆ. ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ಕೊಳಚೆ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪೌಷ್ಠಿಕೆ, ಸಾಂಕ್ರಾಮಿಕ ರೋಗಗಳು ಹೆಚಳಕ್ಕೆ ಕಾರಣವಾಗಿದೆ. ಬಡತನ ಹೆಚ್ಚಳ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಜನಸಂಖ್ಯೆ ಕಾರಣವಾಗಿದೆ ಎಂದು ತಿಳಿಸಿದರು. 
ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅನೇಕ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು. ವಿವಾಹಿತರು, ಮಹಿಳೆಯರು, ಯುವಕ/ಯುವತಿಯರಿಗೆ ಜನಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳನ್ನು ತಿಳಿಸಲಾಗುತ್ತಿದೆ. ವಿವಾಹಿತರು ಜನನ ಅಂತರವನ್ನು ಕಾಪಾಡಿ, ಜನನ ಅಂತರವನ್ನು ಕನಿಷ್ಠ ಒಂದು ಮಗುವಿನಿಂದ ಮತ್ತೊಂದು ಮಗುವಿಗೆ 4 ವರ್ಷ ಅಂತರವಿರಬೇಕು, ಎರಡು ಮಕ್ಕಳಾದ ಮೇಲೆ ಸ್ವಪ್ರೇರಿತವಾಗಿ ಬರುವ ಪುರುಷರಿಗೆ ಎನ್‍ಎಸ್‍ವಿ(ಪುರುಷರ ಸಂತಾನ ಹರಣ ಚಿಕಿತ್ಸೆ) ಮಾಡಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. 
ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಚಿಕ ್ಕಕುಟುಂಬ ಚೊಕ್ಕ ಕುಟುಂಬ ಎನ್ನುವ ಘೋಷವಾಖ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ವಿವಿಧ ರೀತಿಯಲ್ಲಿ ಗ್ರಾಮಿಣ ಭಾಗದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. 
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಅವರು ಮಾತನಾಡಿ ಜನಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅನೇಕ ಕುಟುಂಬ ಕಲ್ಯಾಣ ಯೊಜನೆಗಳನ್ನು ಜಾರಿಗೆ ತಂದಿದ್ದು ಇದರಿಂದ ನವ ವಿವಾಹಿತರು ಈ ವಿಧಾನಗಳನ್ನು ಅಳವಡಿಸುವುದರಿಂದ ಮೊದಲ ಮಗುವನ್ನು 2 ವರ್ಷಗಳ ನಂತರ ಪಡೆಯಬಹುದು. ಮಕ್ಕಳ ಮಧ್ಯೆ ಮೂರರಿಂದ ನಾಲ್ಕು ವರ್ಷಗಳ ಅಂತರವನ್ನು ಕಾಯ್ದುಕೊಳ್ಳಬಹುದು, ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜೈಬುನಿಸಾ ಬೀಳಗಿ, ಟಿ.ಎಚ್.ಇ.ಓ ಬಾಗವಾನ, ಕುಂಬಾರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tuesday, July 14, 2020

15-07-2020 EE DIVASA KANNADA DAILY NEWS PAPER

ಜಿಲ್ಲೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ 3 ಕೋವಿಡ್ ಸೋಂಕಿತರ ನಿಧನ : ಶಿಷ್ಟಾಚಾರದಂತೆ ಅಂತ್ಯಕ್ರಿಯೆ


ಈ ದಿವಸ ವಾರ್ತೆ
ವಿಜಯಪುರ  : ಜಿಲ್ಲೆಯಲ್ಲಿ ಇಂದಿನ ವೈದ್ಯಕೀಯ ವರದಿಯನ್ವಯ ಮೂವ್ವರು ಕೋವಿಡ್-೧೯ ಪಾಸಿಟಿವ್ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ವಿಜಯಪುರ ನಗರದ ಶಾಪೇಟಿ, ಸ್ಟೇಶನ್ ಹಿಂದಿನ ರಸ್ತೆಯ ನಿವಾಸಿಯಾದ ೫೫ ವರ್ಷದ ಪುರುಷ (ರೋಗಿ ಸಂಖ್ಯೆ – ೨೪೭೭೩) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೫-೦೭-೨೦೨೦ ರಂದು ನಿಮೋನಿಯಾ, ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೧-೭-೨೦೨೦ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿಜಯಪುರ ನಗರದ ಮುರಾಣಕೇರಿ ಕಾಲನಿಯ ನಿವಾಸಿಯಾದ ೫೦ ವರ್ಷದ ಪುರುಷ (ರೋಗಿ ಸಂಖ್ಯೆ – ೩೧೮೮೦) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೧೦-೦೭-೨೦೨೦ ರಂದು ೧೨.೪೨ ಗಂಟೆಗೆ ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ನಾಲ್ಕು ವರ್ಷಗಳಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ೨ ವರ್ಷಗಳಿಂದ ಹೃದಯ ಸಂಬAಧಿ ಕಾಯಿಲೆಗಳಿಂದ ಬಳಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೦-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅದೇ ರೀತಿ ವಿಜಯಪುರ ನಗರದ ಕಾಳಿಕಾ ನಗರ, ಆಶ್ರಮದ ನಿವಾಸಿಯಾದ ೬೮ ವರ್ಷದ ಪುರುಷ (ರೋಗಿ ಸಂಖ್ಯೆ – ೩೫೨೧೬) ಕೋವಿಡ್ ಪಾಸಿಟಿವ್ ವ್ಯಕ್ತಿಯು ದಿನಾಂಕ ೦೭-೦೭-೨೦೨೦ ರಂದು ಕೆಮ್ಮು, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಮತ್ತು ಏಳು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟು ದಿನಾಂಕ ೧೩-೭-೨೦೨೦ ರಂದು ೯.೦೦ ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.