Monday, April 28, 2025

ರಾಷ್ಟ್ರ ಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯ

ವಿಜಯಪುರ: ಸಮಾಜದಲ್ಲಿ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಮತ್ತು ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರ ಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ  ಹಮ್ಮಿಕೊಂಡಿರುವ ಎರಡು ದಿನಗಳ ‘ಕುವೆಂಪು ಓದು’  ಕಮ್ಮಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯವು  ಶ್ರೇಷ್ಠವಾಗಿದ್ದಲ್ಲಿ ಅದು ಮತ್ತೇ ಮತ್ತೇ ಓದಿಸಿಕೊಳ್ಳುತ್ತದೆ. ಕುವೆಂಪು ರಚಿಸಿದ ಸಾಹಿತ್ಯ ಮತ್ತೆ ಮತ್ತೆ  ಓದಿಸಿಕೊಳ್ಳುವುದರಿಂದ ಆ ಕವಿ ಜೀವಂತವಾಗಿರುತ್ತಾನೆ.  ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪನವರ ಕವಿತೆಯ ಸಾಲುಗಳಂತೆ ಕವಿಗೆ ವಯಸ್ಸಾಗುತ್ತದೆ ಆದರೆ ಕಾವ್ಯಕ್ಕೆ ಅಲ್ಲಾ ಎಂದರು.


ಕುವೆಂಪು ಅವರು ಕನ್ನಡ ಕವಿಗಳಲ್ಲಿಯೇ  ಅಗ್ರಗಣ್ಯರು. ಅವರ ಸುದೀರ್ಘವಾದ ಸಾಹಿತ್ಯ ಮಾನವೀಯ ಮೌಲ್ಯವನ್ನು ಸಾರುತ್ತದೆ. ಮನುಷ್ಯ  ಮನುಷತ್ವವನ್ನು ಹೊಂದಲು ಕುವೆಂಪುರವರ ಸಾಹಿತ್ಯ ಓದಲೇಬೇಕು ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಸಿಂಡಿಕೇಟ್ ಸದಸ್ಯ ಡಾ.ನಟರಾಜ ಬೂದಾಳು ಅವರು ಮಾತನಾಡಿ, ಕುವೆಂಪು ಅವರ ಸಾಹಿತ್ಯ  ಮಾನವೀಯ ಒಲುಮೆಯ ಆಗರ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಕುವೆಂಪುರವರ ಓದಿಗೆ ಸ್ಪಂದಿಸುವುದು ಅತ್ಯಂತ ಅವಶ್ಯಕವಾಗಿದೆ. ಓದು ಸಹಜವಾದ ಓದಾಗಿರದೇ ವ್ಯಕ್ತಿತ್ವ ವಿಕಸನವನ್ನು ಮಾಡುವ ಓದಾಗಬೇಕು. ಅಂತಹ ಓದನ್ನು ಕುವೆಂಪುರವರ ಸಾಹಿತ್ಯದಿಂದ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ. ಅವರು, ಕುವೆಂಪುರವರು ಆತ್ಮವಿಶ್ವಾಸ ತುಂಬುವ ಕವಿಗಳು. ಯಾವ ವ್ಯಕ್ತಿಯ ಆತ್ಮ ವಿಕಾಸ ಬೆಳೆಸುತ್ತದೆಯೋ ಮೌಲ್ಯವನ್ನು ಪ್ರತಿಪಾದಿಸುತ್ತಿದೆಯೋ, ನಂಬಿಕೆಯನ್ನು ದೃಡಗೊಳಿಸುತ್ತದೆಯೋ, ಸಾಮಾಜಿಕ ಪ್ರಸ್ತುತತೆಯನ್ನು ಬಿಂಬಿಸುತ್ತದೆಯೋ ಅದು ನಿಜವಾದ ಸಾಹಿತ್ಯ. ಅಂತಹ ಸಾಹಿತ್ಯವನ್ನು ನೀಡಿದವರು ಕುವೆಂಪುರವರು. ಮಾನವನ ವೈಜ್ಞಾನಿಕ ಜ್ಞಾನ ಸಾರ್ವತ್ರಿಕ ಸತ್ಯವನ್ನು  ಪ್ರತಿಪಾದಿಸುವ ಸಾಹಿತ್ಯವೇ ಜಗತ್ತಿನ  ಶ್ರೇಷ್ಠ ಸಾಹಿತ್ಯ.  ಇಂತಹ ಸಾಹಿತ್ಯವನ್ನು ನೀಡಿದ ಕುವೆಂಪು ಅವರು ಕನ್ನಡದ ಜ್ಞಾನ ಬೆಳವಣಿಗೆಯ ಬೆಳಕಾಗಿ ನಿಂತವರು ಎಂದು ತಿಳಿಸಿದರು. 

ನಾಡಗೀತೆಯನ್ನು ನೀಡಿದ ವಿಶ್ವಕವಿಗಳಲ್ಲೇ ಶ್ರೇಷ್ಠವಾದ ಕುವೆಂಪುರವರ ಸಾಹಿತ್ಯ ‘ಮನುಜ ಮತ ವಿಶ್ವಪಥ’ ಎಂಬ ಸಂದೇಶವನ್ನು ಸಾರುತ್ತದೆ. ವೈಜ್ಞಾನಿಕತೆ ಮತ್ತು ವೈಚಾರಿಕತೆ ಕುವೆಂಪುರವರ ಮಹತ್ವದ ಸಂದೇಶಗಳು. ಮೊಬೈಲ್ ಸಂದೇಶಗಳನ್ನು ಬಿಟ್ಟು ಪುಸ್ತಕ ಓದುವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳು ಜ್ಞಾನದ ಬೆಳಕನ್ನು ಹೊಂದಬೇಕೆಂದು  ಕುಲಸಚಿವ ಶಂಕರಗೌಡ ಸೋಮನಾಳ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.  

ಪ್ರಾಧಿಕಾರದ ಸದಸ್ಯ ಸಂಚಾಲಕ ಎಸ್.ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ  ಡಾ.ರಾಮಲಿಂಗಪ್ಪ ಟಿ.ಬೇಗೂರು ಕಮ್ಮಟದ ರೂಪರೇಷಗಳನ್ನು ವಿವರಿಸಿದರು. ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ  ಡಾ.ಎಂ.ನಾಗರಾಜ ಸ್ವಾಗತಿಸಿದರು. ಕುಮಾರಿ. ನಂದಿನಿ ಕಾರ್ಯಕ್ರಮ ನಿರೂಪಿಸಿದರು.  ವೆಂಕಟಲಕ್ಷ್ಮೀ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment