Friday, March 7, 2025

ಹೆಣ್ಣಿನ ವಿಷಯದಲ್ಲಿ ಬದಲಾಗಬೇಕಾಗಿರುವುದು ಕಾನೂನು ಅಲ್ಲ ಜನರ ವಿಕೃತ ಮನಸ್ಥಿತಿ


"ಯತ್ರ ನಾರ್ಯಸ್ತು ಪೂಜ್ಯಂತೆ

ತತ್ರ ರಮಂತೇ ದೇವತಾ"

ಎಲ್ಲಿ ಹೆಣ್ಣು ಗೌರವಿಸಲ್ಪಡುತ್ತಾಳೆ ಅಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಅನಾದಿಕಾಲದಿಂದಲೂ ನಂಬಿರುವ ಸಂಸ್ಕೃತಿ ನಮ್ಮದು.

             ಕಳೆದ ಕೆಲವು ಸಹಸ್ರಮಾನಗಳಲ್ಲಿ ಭಾರತದಲ್ಲಿ ಮಹಿಳೆಯರ ಸ್ಥಾನಮಾನವು ಅನೇಕ ಮಹತ್ತರ ಬದಲಾವಣೆಗಳನ್ನು ಕಂಡಿದೆ. ಹಿಂದೆ ಭಾರತದಲ್ಲಿ ಮಹಿಳೆಯರು ವರದಕ್ಷಿಣೆ, ಬಾಲ್ಯ ವಿವಾಹ,ಲಿಂಗ ಅಸಮಾನತೆ, ಲೈಂಗಿಕ ಕಿರುಕುಳ ಮುಂತಾದ ಅನೇಕ ಸವಾಲಿನ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ಈಗ ಮಹಿಳೆಯರು ಪುರುಷರಷ್ಟೇ ಸಮಾನ ರೀತಿಯಲ್ಲಿ ಬದುಕುತ್ತಿದ್ದಾರೆ. ಉನ್ನತವಾದ ಶಿಕ್ಷಣವನ್ನು ಪಡೆದು, ಅಂತರಾಷ್ಟ್ರೀಯ, ಶೈಕ್ಷಣಿಕ ,ಭಾಷಾವಾರು, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ.

"ಹೆಣ್ಣು ಅಬಲೆ ಅಲ್ಲ ಸಬಲೆ"ಎಂದು ಇಡೀ ಜಗತ್ತಿಗೆ ತೋರಿಸುತ್ತಿದ್ದಾರೆ.

          ಇದೆಲ್ಲ ಒಂದು ಕಡೆ ಆದರೆ, ನಮ್ಮ ಭಾರತ ದೇಶವು ಆರ್ಥಿಕತೆ ಮತ್ತು ವಿಜ್ಞಾನದಲ್ಲಿ ಮುಂದುವರೆದರು ಕೂಡ ಮಹಿಳೆಯರ ಸುರಕ್ಷತೆ ಕಾಪಾಡುವಲ್ಲಿ ವಿಶ್ವದ ಮುಂದೆ ಶೂನ್ಯವಾಗಿ ನಿಂತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಮಹಿಳೆಯರು ಮಾತ್ರ ಒಬ್ಬರೇ ನಿರ್ಭಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅವರ ಮೇಲೆ ಆಗುತ್ತಿರುವ ಅತ್ಯಾಚಾರವೇ ಇದಕ್ಕೆ ಕಾರಣ. ಗಾಂಧೀಜಿ ಅವರು ಹೇಳಿದ ಮಾತಿನಂತೆ ಒಂದು ಹೆಣ್ಣು ಮಧ್ಯರಾತ್ರಿಯಲ್ಲಿ ಒಬ್ಬಳೇ ಧೈರ್ಯದಿಂದ ತಿರುಗಾಡಿದಾಗ ಮಾತ್ರ ನಮ್ಮ ದೇಶ ಸ್ವಾತಂತ್ರ್ಯವಾಗುತ್ತದೆ ಎಂದಿದ್ದಾರೆ. 

          ‌ ಆದರೆ ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರ ಮಹಿಳೆಯರಿಗಾಗಿ ಕಾನೂನುಗಳು, ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದರು ಸಹ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಡೆಯಲು ಆಗುತ್ತಿಲ್ಲ 


"ಹಗಲಿನಲ್ಲೋ ಇರುಳಿನಲ್ಲೋ

ಒಂಟಿಯಾಗಿ ನಡೆಯಲು 

ಹೆಣ್ಣು ಎಂದು ಅರಿತ ಕಾಮಿ

ದೇಹ ಬಗೆದು ತಿಂದನು"

    ಇಂತಹ ಕೃತ್ಯದಿಂದಾಗಿ ಅದೆಷ್ಟೋ ಅಸಂಖ್ಯಾತ ಮಹಿಳೆಯರು ಬಲಿಯಾಗಿದ್ದಾರೆ. ಅವರ ಭವಿಷ್ಯವೇ ನಾಶವಾಗಿ ಹೋಗಿದೆ ಇತ್ತೀಚಿಗೆ ಅಂತೂ ಒಂದು ಹೆಣ್ಣು ಮನೆಯಿಂದ ಹೊರ ಬಂದರೆ ಅವಳು ಸುರಕ್ಷಿತವಾಗಿ ಮತ್ತೆ ಮನೆಗೆ ಹೋಗುತ್ತಾಳೆ ಎಂಬ ನಂಬಿಕೆಯೇ ಹೊರಟು ಹೋಗಿ ಭಯದ ವಾತಾವರಣ ಕೂಡಿದೆ. 

 "ಹೆಣ್ಣು ದೇಶದ ಕಣ್ಣು"ಎನ್ನುವ ಈ ಸಮಾಜ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನವನ್ನು ನಿಲ್ಲಿಸುತ್ತಿಲ್ಲ ಜೊತೆಗೆ ಅನ್ಯಾಯಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ದೊರಕುವಂತೆ ಮಾಡುತ್ತಿಲ್ಲ. 


ಕಣ್ಣಲ್ಲವೇ ಹೆಣ್ಣು ಸಂಸಾರಕ್ಕೆ, 

ಚಕ್ರವಲ್ಲವೇ ಹೆಣ್ಣು ಬಾಳ ಬಂಡಿಗೆ 

ಒಲವಲ್ಲವೇ ಹೆಣ್ಣು ಪ್ರೀತಿ ಪ್ರೇಮಕೆ

ಆದರ್ಯಾಕವಳಿಗೆ ಅತ್ಯಾಚಾರದ ಶಿಕ್ಷೆ...?

       ಇನ್ನೊಂದು ಮಾತೇನೆಂದರೆ ಈ ಅತ್ಯಾಚಾರದಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಮನೆಯಿಂದ ಪ್ರಾರಂಭವಾಗುವ ನ್ಯಾಯವನ್ನು ಮಾಡಬೇಕಾಗಿದೆ. ಯಾಕೆಂದರೆ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ, ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂಬುದನ್ನು ಪಾಲಕರು ಕಲಿಸಿಕೊಟ್ಟರೆ ಇಂತಹ ಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರು ನಿಲ್ಲಿಸಲು ಸಾಧ್ಯವಾಗುತ್ತದೆ. 

  ಮಹಿಳೆಯರನ್ನು ದೌರ್ಜನ್ಯ ಮತ್ತು ಕಿರುಕುಳದಿಂದ ರಕ್ಷಿಸುವ ಮೂಲಕ ಮಹಿಳೆಯರ ಉನ್ನತಿ ತಳಮಟ್ಟದಿಂದ ಪ್ರಾರಂಭವಾಗಬೇಕು. 

  ಇನ್ನಾದರೂ ನಮ್ಮ ದೇಶವು ಈ ಅತ್ಯಾಚಾರ, ವರದಕ್ಷಣೆ ಪಿಡುಗು, ಬಾಲ್ಯ ವಿವಾಹಗಳಂತಹ ದೌರ್ಜನ್ಯಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಬೇರೆ ದೇಶಗಳಲ್ಲಿರುವಂತಹ ಕೆಲವು ಕಾನೂನು ನಿಯಮಗಳನ್ನು ನಮ್ಮ ದೇಶದಲ್ಲಿ ಕೂಡ ಜಾರಿಗೆ ತರಬೇಕು. ಅಂದಾಗ ಮಾತ್ರ ಇಂತಹ ಬರ್ಬರ ಕೃತ್ಯಗಳು ನಡೆಯುವುದಿಲ್ಲ. 


ಅತ್ಯಾಚಾರ ಹಿಂಸಾಚಾರ 

ಎಲ್ಲಿ ತನಕ ನಿಲ್ಲದು 

ಹೆಣ್ಣಿನ, 

ಮೊಗದಲ್ಲಿ ನಗುವು

ಅಲ್ಲಿ ತನಕ ಕಾಣದು...!!

 "ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು" 

 



ಪ್ರೇಮಾ ಅಶೋಕ ಇಟ್ಟಗಿ 

ಬಿ.ಎ(ಆರನೇ ಸೆಮಿಸ್ಟರ್)  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment