Thursday, August 28, 2025

ಪಿಪಿಪಿ ಮಾದರಿ ಕಾಲೇಜಿನಿಂದ ಶೋಷಣೆಗೆ ದಾರಿ : ಸಚಿವ ಶಿವಾನಂದ ಆತಂಕ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯ ಅಪರಸ್ವರ ಜಿಲ್ಲೆಯಾದ್ಯಂತ ಪ್ರತಿಧ್ವನಿಸುತ್ತಿದ್ದು, ಈ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯ ಬಗ್ಗೆ ಸ್ವತ: ಸಚಿವ ಶಿವಾನಂದ ಪಾಟೀಲ ಸಹ ವಿರೋಧ ವ್ಯಕ್ತಪಡಿಸಿದ್ದು, ಇದು ಜನರ ಶೋಷಣೆಗೆ ಕಾರಣವಾಗುತ್ತದೆ ಹೊರತು ಜನರಿಗೆ ಯಾವ ರೀತಿಯ ಪ್ರಯೋಜನವೂ ಆಗುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ಅನಿವಾರ್ಯತೆಯೇ ಇಲ್ಲ, ಒಂದು ವೇಳೆ ಈ ಮಾದರಿಯಲ್ಲಿ ವೈದ್ಯಕೀಯ ಕಾಲೇಜ್ ಸ್ಥಾಪನೆಯಾದರೆ ಅದು ಒಂದು ರೀತಿ ಜನರ ಶೋಷಣೆಗೆ ಕಾರಣವಾಗುತ್ತದೆ, ಈ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿಯೂ ವಿರೋಧಿಸಿದ್ದೇನೆ, ಮುಖ್ಯಮಂತ್ರಿಗಳಿಗೂ ಸಹ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿರುವೆ ಎಂದರು.

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿಯೇ ಸಾಕಷ್ಟು ಜಾಗ ಹಾಗೂ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಅನೇಕ ಪೂರಕ ಸೌಲಭ್ಯಗಳನ್ನು ಕಲ್ಪಿಸಿದ್ದೇನೆ, ನೂರಾರು ಎಕರೆ ಜಾಗ, ಟ್ರಾಮಾ ಸೆಂಟರ್, ಕ್ಯಾನ್ಸರ್ ಸೆಂಟರ್ ಹೀಗೆ ಎಲ್ಲವೂ ಇದೆ, ಹೀಗಿರುವಾಗ ಖಾಸಗಿಯವರೆಗೆ ಮಣೆ ಹಾಕುವ ಅವಶ್ಯಕತೆಯೇ ಇಲ್ಲ ಎಂದರು.

ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಯ ವಿಷಯವಾಗಿ ಈ ಹಿಂದೆಯೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಪತ್ರ ಬರೆದಿದ್ದೇನೆ, ಅವಶ್ಯಕತೆ ಇದ್ದರೆ ಇನ್ನೊಮ್ಮೆ ಪತ್ರ ಬರೆಯುವೆ ಎಂದರು.

ನನಗೆ ಕ್ರೆಡಿಟ್ ಬೇಡವೇ ಬೇಡ :

ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಟ್ರಾಮಾ ಸೆಂಟರ್, ೩೦೦ ಹಾಸಿಗೆಯುಳ್ಳ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಸೆಂಟರ್ ಎಲ್ಲವೂ ಆರಂಭಿಸಲು ದಿವ್ಯ ಸಂಕಲ್ಪ ಮಾಡಿ ಯಶಸ್ವಿಯೂ ಆಗಿದೆ, ಆದರೆ ಅದರ ಕಾರ್ಯಾರಂಭಕ್ಕೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ನೋವು ನನ್ನನ್ನು ಈಗಲೂ ಕಾಡುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಬೇಸರ ವ್ಯಕ್ತಪಡಿಸಿದರು.

ನನಗೆ ಕ್ರೆಡಿಟ್ ಬರುವುದನ್ನು ತಪ್ಪಿಸಲು ಸಹ ಈ ರೀತಿ ವಿಳಂಬವಾಗುತ್ತಿದೆಯೇನೋ ಎಂದು ಸಹ ನೋವಾಗುತ್ತದೆ, ಆದರೆ ನಾನು ಕ್ರೆಡಿಟ್ಗಾಗಿ ಮಾಡಿಲ್ಲ, ಜನರ ಒಳಿತಿಗಾಗಿ ಇದನ್ನು ಮಾಡಿದ್ದೇನೆ, ನನಗೆ ಕ್ರೆಡಿಟ್ ಬರುತ್ತದೆ ಎಂದು ಯೋಚಿಸುವವರು ಬೇಕಾದರೆ ತಾವೇ ಕ್ರೆಡಿಟ್ ತೆಗೆದುಕೊಂಡರೂ ಚಿಂತೆಯಿಲ್ಲ ಜನರಿಗಾಗಿ ಈ ಕಾರ್ಯ ಮಾಡಲಿ ಎಂದರು. ಈ ವಿಷಯದಲ್ಲಿ ನನಗೆ ಸಹಕಾರ ಸಿಗಲಿಲ್ಲ ಎನ್ನುವ ವಿಷಯದಲ್ಲಿಯೂ ನನಗೆ ನೋವಿದೆ ಎಂದರು.

ವಿಜಯಪುರಕ್ಕೆ ಸಂಸದರು  ಏಮ್ಸ್ ತರಲಿ:

ವಿಜಯಪುರ : ನೀವು ಗೋಳಗುಮ್ಮಟವಂತೂ ಕಟ್ಟಲು ಆಗಲ್ಲ, ಕೊನೆಪಕ್ಷ ಏಮ್ಸ್ ಕಾಲೇಜು ವಿಜಯಪುರದಲ್ಲಿ ಸ್ಥಾಪನೆಯಾಗುವಂತೆ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಎಂದು ಸಚಿವ ಶಿವಾನಂದ ಪಾಟೀಲ ಸಂಸದ ರಮೇಶ ಜಿಗಜಿಣಗಿ ಅವರಿಗೆ ಒತ್ತಾಯಿಸಿದರು.

ಈಗಾಗಲೇ ಧಾರವಾಡದಲ್ಲಿ ಐಐಟಿ ಸೇರಿದಂತೆ ಅನೇಕ ಪ್ರತಿಷ್ಠಿತ ಕಾಲೇಜುಗಳು ಸ್ಥಾಪನೆಯಾಗಿವೆ, ವಿಜಯಪುರದಲ್ಲಿ ಏಮ್ಸ್ ಸ್ಥಾಪನೆಯಾದರೆ ಅತ್ಯಂತ ಅನುಕೂಲವಾಗಿದೆ, ಈ ವಿಷಯದಲ್ಲಿ ಸಂಸದರು ಗಂಭೀರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಏಮ್ಸ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment