Monday, August 5, 2024

ಅಗಲಿದ ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಅವರಿಗೆ ಸಕಲ ಸರಕಾರಿ ಗೌರವ ಸಲ್ಲಿಸಲು ಒತ್ತಾಯ

 

ವಿಜಯಪುರ ಜಿಲ್ಲೆಯ ಹಿರಿಯ ಹೋರಾಟಗಾರ, ಕಮ್ಯುನಿಷ್ಟ ಮುಖಂಡ ಭೀಮಶಿ ಕಲಾದಗಿ (87) ಸೋಮವಾರ ರಾತ್ರಿ 9.40 ಗಂಟೆಗೆ ವಿಧಿವಶರಾಗಿದ್ದಾರೆ.

ತಮ್ಮ ಜನಪರ ಹೋರಾಟಗಳಿಂದ ನಾಡಿನಾದ್ಯಂತ ಹೆಸರಾಗಿದ್ದ ಭೀಮಶಿ ಕಲಾದಗಿಯವರು ಬರಗಾಲ ಭೀಮಶಿ ಎಂದೇ ಪ್ರಸಿದ್ಧ ಪಡೆದಿದ್ದರು. ಜಿಲ್ಲೆಯಲ್ಲಿ ಮುಳವಾಡ ಏತನೀರಾವರಿ ಸೇರಿದಂತೆ  ಸಮಗ್ರ ನೀರಾವರಿಗಾಗಿ, ರೈತರಿಗಾಗಿ, ಕಾರ್ಮಿಕರಿಗಾಗಿ, ದಲಿತರಿಗಾಗಿ ಅಲ್ಲದೆ ಅನ್ಯಾಯ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಜೀವನವಿಡಿ ಹೋರಾಟ ಮಾಡಿದ್ದರು.ಅವರ ಅಗಲಿಕೆಯಿಂದ ಹಿರಿಯ ಹೋರಾಟದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ‌‌‌. 

ತಮ್ಮ ನೇರ ನಡೆ- ನುಡಿಯ ಹೋರಾಟದಿಂದ ಆಳುವ ವರ್ಗ ಹಾಗೂ ಸರ್ಕಾರಗಳನ್ನು ಬಡಿದೆಬ್ಬಿಸುತ್ತಿದ್ದರು‌‌ ಹಿರಿಯ ಚೇತನ ಕಲಾದಗಿ ಅವರು ಹಾಕಿದ ಹೋರಾಟದ ಮಾರ್ಗ ಜಿಲ್ಲೆಯಲ್ಲಿ ಹೋರಾಟವನ್ನು ಮುನ್ನಡೆಸಲಿದೆ.              ಜಿಲ್ಲೆಯಲ್ಲಿ ಜನಪರ ಹೋರಾಟ ಮುನ್ನಡೆಸಿದ ನಾಯಕನಿಗೆ ಆಳುವ ಸರಕಾರಗಳು ಜೀವಿತ ಅವಧಿಯಲ್ಲಿ ಗುರುತಿಸಲಿಲ್ಲ ಅವರ ಹೋರಾಟಗಳು ಜನಪರ ಆಗಿದ್ದು ಬಹುಷಃ ಮುಳುವಾಯಿತೇನೋ?  ಯಾರ್ಯಾರನ್ನೋ ಸನ್ಮಾನಿಸಿ ಗೌರವಿಸುವ ಸರಕಾರ ಕಲಾದಗಿ ಅವರನ್ನು ಯಾಕೆ ಗುರುತಿಸಲಿಲ್ಲ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆಯಾಗಿದೆ .ಸರಕಾರ ಕೊಡುವ ಮಾನ ಸಮ್ಮಾನಗಳಿಗೆ ಜೋತು ಬೀಳದ ನೇರ ನಿಷ್ಟುರ ಧೃಡ ವ್ಯಕ್ತಿತ್ವ ಕಲಾದಗಿ ಅವರದಾಗಿತ್ತು. ಕೊನೆ ಪಕ್ಷ ರಾಜ್ಯ ಸರಕಾರ ಸರಕಾರಿ ಸಕಲ ಗೌರವದೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಿ ಜನಪರ ಹೋರಾಟಗಾರನಿಗೆ ನೈಜ ಗೌರವ ಸಲ್ಲಿಸಬೇಕು ಎಂಬುದು ರಾಜ್ಯದ ಪ್ರತಿಯೊಬ್ಬ ಅವರ ಅಭಿಮಾನಿಯ ಒತ್ತಾಯವಾಗಿದೆ . ಕೂಡಲೇ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅಂತಿಮ ಸಂಸ್ಕಾರದ ಉಸ್ತುವಾರಿ ತೆಗೆದುಕೊಂಡು ರಾಜ್ಯದ ಮೂಲೆ ಮೂಲೆಯಿಂದ ಬರುವ ವಿವಿಧ ಸಂಘಟನೆಗಳ ಮುಖಂಡರು, ರೈತರು, ಕಾರ್ಮಿಕರು ಹಾಗೂ ಪ್ರತಿಯೊಬ್ಬ ಅವರ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಜನಪರ ಹೋರಾಟಗಾರನಿಗೆ ಗೌರವದಿಂದ ಕಳಿಸಿಕೊಡಬೇಕೆಂದು ಕಾಂ. ಭೀಮಶಿ ಕಲಾದಗಿ ಅವರ ಅಭಿಮಾನಿಗಳು ವಿನಂತಿಸಿಕೊಂಡಿದ್ದಾರೆ.



No comments:

Post a Comment