Saturday, July 25, 2020

ಪಂಚಮಿ ಹಬ್ಬಕೆ ಕರಿತಾನ ಅಣ್ಣಯ್ಯ


ಅಣ್ಣ ಕರಿಯೋ ನೀ ಬಂದು
ತಂಗಿಯ ತವರಿಗೆ ಬಾ ಎಂದು
ಕಾದು ಕೂತಿಹಳು ನಿನ್ನ ಕೂಗಿಗಾಗಿ
ನಾಗರ ಪಂಚಮಿ ಹಬ್ಬಕ ಬರಲೆಂದು।

ದೇವರ ಪಾಲು 
ದಿಂಡಿರ ಪಾಲು
ಗುರುವಿನ ಪಾಲೆಂದು
ಹಾಲೆರೆಯುವಳು ತಂಗಿ 
ನಾಗರ ಹುತ್ತಕ।

ನಾಗಪ್ಪಗೆ ಕೈ ಮುಗಿದು ಬೇಡುವಳು
ಅಣ್ಣನ ಬಾಳ ಸಿರಿಯು
ಕರಗದಿರಲಿ ಎಂದೆಂದು ಎನ್ನುತ
ಮೊರೆಹೋಗುವಳು ತಂಗಿ ನಾಗದೇವನಲ್ಲಿ।

ತೂಗುಯ್ಯಾಲೆಯಲಿ ಕೂರಿಸಿ
ತೂಗುವನು ಅಣ್ಣಯ್ಯ ತಂಗಿಯನು
ಹರಸುವನು ತಂಗಿ ಬದುಕಿನ ಸುಖವು
ಸಂತಸದ ಹೊನಲಲಿ ಜೀಕುತಿರಲೆಂದು।

ಏಳೇಳು ಜನುಮಕು
ನೀನೆನ್ನ ಒಡಹುಟ್ಟಿದವಳಾಗಿ ಇರು ಎಂದು
ಕೋರಿಕೊಳ್ಳುವನಣ್ಣ ತಂಗಿಯ
ಬಾಯಿಗೆ ಸಿಹಿ ಉಂಡೆಯ ತಿನಿಸಿ।

ಹಬ್ಬದ ಮೇರಗು ನೀನಮ್ಮ
ನೀ ಹುಟ್ಟಿ ಬೆಳೆದ ಮನೆಯು
ನಿನ್ನ ತವರಮ್ಮ
ಸದಾ ಈ ಮನೆಯ ಮನಗಳು 
ನಿನ್ನ ಒಲವಿಗಾಗಿ ಇರುವವಮ್ಮ
ನಿನ್ನ ಬರುವಿಕೆಗಾಗಿ ಸದಾ
ತೆರೆದಿರುವದು ನೋಡು 
ನಿನ್ನ ತವರಿನ ಬಾಗಿಲಿಗಳಮ್ಮ॥

ಮಮತಾ ಗುಮಶೆಟ್ಟಿ
ವಿಜಯಪುರ

No comments:

Post a Comment