Saturday, August 30, 2025

ಕ್ರೀಡೆ ಕೇವಲ ಆಟವಲ್ಲ, ಜೀವನದ ಶಿಸ್ತು, ಮೌಲ್ಯಗಳ ಪಾಠ – ಡಾ.ರವಿ ಗೋಲಾ

ವಿಜಯಪುರ: ಹಾಕಿಯ ಜಾದುಗಾರ ಮೇಜರ್ ಧ್ಯಾನಚಂದ ಕೇವಲ ಆಟಗಾರರಲ್ಲ, ದೇಶಪ್ರೇಮಿ ಹಾಗೂ ಶಿಸ್ತುಪರ ವ್ಯಕ್ತಿತ್ವದ ಮಾದರಿ ಎಂದು ಸಿಂದಗಿ ಪೊರವಾಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರವಿ ಗೋಲಾ ಅವರು ಹೇಳಿದರು.

“ನಗರದ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣಾ ಕಾರ್ಯಕ್ರಮದಲ್ಲಿ, ಭಾರತದ ಹಾಕಿ ದಂತಕಥೆ ಮೇಜರ್ ಧ್ಯಾನಚಂದರವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.”

ಅವರ ಅದ್ಭುತ ಆಟದ ಬಗ್ಗೆ ಮಾತನಾಡಿ, ಹಿಟ್ಲರ್ ಕೂಡ ಧ್ಯಾನಚಂದರನ್ನು ಮೆಚ್ಚಿಕೊಂಡಿದ್ದ ಘಟನೆ ಪ್ರಸ್ತಾಪ ಮಾಡಿದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನದಿಂದ ಧ್ಯಾನಚಂದ ವಿಶ್ವದ ಗಮನ ಸೆಳೆದಿದ್ದರು. ಹಿಟ್ಲರ್ ಅವರಿಗೂ ಆಶ್ಚರ್ಯ ಹುಟ್ಟಿದಂತಹ ಕ್ರೀಡಾ ಪ್ರತಿಭೆ ಅವರದ್ದಾಗಿತ್ತು. ಧ್ಯಾನಚಂದರ ಸಾಧನೆಗಳು ಇಂದಿಗೂ ಪ್ರತಿಯೊಬ್ಬ ಕ್ರೀಡಾಭಿಮಾನಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು. 

ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ರಸಪ್ರಶ್ನೆ ನಡೆಸಿ ನಗದು ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಭೋದಿಸಿ, ಮಕ್ಕಳಿಗೆ ಕ್ರೀಡೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು. ಕ್ರೀಡೆಯ ಮೂಲಕ ಶಿಸ್ತು, ಆರೋಗ್ಯ ಹಾಗೂ ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬಹುದೆಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ವಿಜಯಾ ಕೋರಿಶೆಟ್ಟಿ ಮಾತನಾಡಿ, ಕ್ರೀಡೆಯ ಮೂಲಕ ಅನೇಕ ಸಾಮಾಜಿಕ ಹಾಗೂ ನೈತಿಕ ಗುಣಗಳನ್ನು ಬೆಳೆಸಿಕೊಳ್ಳಬಹುದು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗುವುದರೊಂದಿಗೆ, ಸೋಲು–ಗೆಲುವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣ ಬೆಳೆಯುತ್ತದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಶಿಕ್ಷಣ ನಿಕಾಯದ ಡೀನ್ ಪ್ರೊ. ಸಕ್ಪಾಲ್ ಹೂವಣ್ಣ ಮಾತನಾಡಿ, ವಿದ್ಯಾರ್ಥಿನಿಯರಿಗೆ ದೈಹಿಕ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು. ನಿತ್ಯದ ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಶಕ್ತಿ, ಆತ್ಮವಿಶ್ವಾಸ ಮತ್ತು ಶಿಸ್ತು ಕೂಡ ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಶ್ರೀನಿವಾಸ, ಡಾ.ಕಿರಣ ಜಿ.ಎನ್, ಪ್ರೊ.ಜ್ಯೋತಿ ಉಪಾದ್ಯೆ, ಡಾ.ರಮೇಶ ಸೋನಕಾಂಬ್ಳೆ, ಡಾ.ವಿಶ್ವನಾಥ ನಡಕಟ್ಟಿ, ಮತ್ತು ಸ್ನಾತಕ, ಸ್ನಾತಕೋತ್ತರ ಹಾಗೂ ಬೊಧಕ ಮತ್ತು ಬೊಧಕೇತರ ಸಿಬ್ಬಂದಿಗಳು ಮತ್ತಿತರಿದ್ದರು. ಕ್ರೀಡಾ ನಿರ್ದೇಶಕ ಪ್ರೊ. ಹನುಮಂತಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಜ್ಯೋತಿ ಉಪಾದ್ಯೆಯವರು ನಿರೂಪಿಸಿದರು, ಡಾ.ಕಿರಣ ಜಿ.ಎನ್ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment