Tuesday, August 26, 2025

ಪತ್ರಕರ್ತೆ ಪ್ರೇಮಾ ಕುಲಕರ್ಣಿ ಅವರು ರಚಿಸಿರುವ 'ಹೂ ಮಾಲೆ' ಗ್ರಂಥ ಲೋಕಾರ್ಪಣೆ | ಮಾನವೀಯತೆ, ಪ್ರೀತಿ ಬೋಧಿಸುವ ಪಠ್ಯ ಹಿಂದೆಂದಿಗಿಂತಲೂ ಈಗ ಅಗತ್ಯ : ಲೇಖಕಿ ಭಾರತಿ ಪಾಟೀಲ

 ವಿಜಯಪುರ : ಪಠ್ಯ ಪುಸ್ತಕ ರಚನೆ ರಾಜಕೀಯ ಪ್ರೇರಿತವಾಗಿರಬಾರದು, ಅದು ರಾಜಕೀಯ ಮುಕ್ತವಾಗಿರಬೇಕು, ಮಾನವೀಯತೆ, ಪ್ರೀತಿ ಬೋಧಿಸುವ ಪಠ್ಯ ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ ಎಂದು ಲೇಖಕಿ ಭಾರತಿ ಪಾಟೀಲ ಹೇಳಿದರು.

ವಿಜಯಪುರದ ಜಿಲ್ಲಾ ಪಂಚಾಯತ ಬಳಿ ಇರುವ ಗಾಂಧೀ ಭವನದಲ್ಲಿ   ಶ್ರೀ ಹಲಗಣೀಶ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ  ಪತ್ರಕರ್ತೆ ಪ್ರೇಮಾ ಕುಲಕರ್ಣಿ ಅವರು ರಚಿಸಿರುವ 'ಹೂ ಮಾಲೆ' ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿದ ಅವರು, ಇಂದು ಹೊಡಿ, ಬಡಿ, ಕಡಿ ಸಾಹಿತ್ಯವೇ ಮಕ್ಕಳಲ್ಲಿ ಪ್ರಭಾವ ಬೀರುತ್ತಿದೆ, ಮಕ್ಕಳಿಗೆ ಹಾಡು ಹೇಳಲು ಹೇಳಿದರೆ ಹೊಡಿ ಮಗ ಹಾಡು ಹೇಳುತ್ತಾರೆ, ಹೀಗಾಗಿ ಪಠ್ಯದಲ್ಲಿ ಮಾನವೀಯತೆ, ಪ್ರೀತಿ ಪ್ರತಿಪಾದಿಸುವ ವಿಷಯಗಳು ಪಠ್ಯದಲ್ಲಿರಬೇಕು ಎಂದರು‌.

ಇಂದು ವಾಕ್ ಸ್ವಾತಂತ್ರ್ಯ ದುರಪಯೋಗವಾಗಿ ಒಂದು ರೀತಿ ವಾಕರಿಕೆ ಸ್ವಾತಂತ್ರ್ಯವಾಗಿ  ಬುರುಡೆ ಸ್ವಾತಂತ್ರ್ಯ ರೀತಿಯಲ್ಲಿ   ಪ್ರತಿಧ್ವನಿತವಾಗುತ್ತಿರುವುದು ನೋವಿನ ಸಂಗತಿ ಎಂದರು.
ವಿವಾದಿತ ವಿಷಯಗಳೇ ಮಣೆ ಹಾಕುವುದು ನಡೆದಿದೆ, ಇದು ನಿಲ್ಲಬೇಕು,  ಮಾನವೀಯತೆ ಸಾಹಿತ್ಯ ಇಂದಿನ ಅವಶ್ಯಕತೆಯಾಗಿದೆ ಎಂದರು.
ಮಹಿಳೆ ಬರೆದದ್ದು ಅಡುಗೆ ಮನೆ ಸಾಹಿತ್ಯ, ಅವಳು ಪ್ರಬುದ್ದ ಸಾಹಿತ್ಯ ಬರೆಯುವುದಿಲ್ಲ ಎಂಬ ವಿಮರ್ಶಕರ ದೃಷ್ಟಿಕೋನ ಇನ್ನೂ ಬದಲಾಗಿಲ್ಲ, ಇದು ಬದಲಾಗಬೇಕು ಎಂದರು.
ಜನ್ಮದಿಂದ ಮರಣದವರೆಗೂ ಹೂವು ಮಾನವ ಜೀವನದೊಂದಿಗೆ ಬೆಸೆದುಕೊಂಡಿದೆ, ಈ ಪುಷ್ಪಗಳ ಸಮಗ್ರ ಇತಿಹಾಸ, ವಿಶೇಷತೆಯನ್ನು ಪತ್ರಕರ್ತೆ ಪ್ರೇಮಾ ಕುಲಕರ್ಣಿ ಅವರು ಗ್ರಂಥ ರೂಪದಲ್ಲಿ ಹೊರ ತಂದಿರುವುದು ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕೃತಿ ಲೋಕಾರ್ಪಣೆ ಮಾಡಿದ ಕೂಡಗಿ ಎನ್.ಟಿ.ಪಿ.ಸಿ.  ಸಾರ್ವಜನಿಕ ಸಂಪರ್ಕಾಧಿಕಾರಿ ಪೂಜಾ ಪಾಂಡೆ ಮಾತನಾಡಿ, ಪುಷ್ಪಗಳು ಕೇವಲ ಕಣ್ಣಿಗೆ  ಸೌಂದರ್ಯ ಕರುಣಿಸುವುದಕ್ಕೆ ಸೀಮಿತವಲ್ಲ, ನಿಸರ್ಗದ ಅಮೂಲ್ಯ ರತ್ನಗಳಿದ್ದಂತೆ, ಪುಷ್ಪಗಳಲ್ಲಿ ಔಷಧೀಯ ಗುಣಗಳಿವೆ, ಅನೇಕ ಪ್ರಯೋಜನಗಳ ಹೂರಣ ಪುಷ್ಪದಲ್ಲಿವೆ, ಈ ಪುಷ್ಪಗಳ ಮಹತ್ವವನ್ನು ಪರಿಚಯಿಸುವ ದೃಷ್ಟಿಯಿಂದ ಈ ಗ್ರಂಥ ಹೊರ ಬಂದಿರುವುದುದು ಸಂತೋಷ ತಂದಿದೆ ಎಂದರು‌.
ಮುಖ್ಯ ಅತಿಥಿಯಾಗಿದ್ದ ಗೋವಾ ಕನ್ನಡತಿ ಅಖಿಲಾ ವಿಜಯ ಕುರಂದವಾಡ ಮಾತನಾಡಿದರು.
ಪುಸ್ತಕ ಪರಿಚಯಿಸಿದ ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಪುಷ್ಪ ತನ್ನ ಸೀಮಿತ ಜೀವಿತ ಅವಧಿಯಲ್ಲಿ ಸುಗಂಧ ಬೀರಿ ಮರೆಯಾಗುತ್ತದೆ, ಆದರೆ ಅನೇಕ ದಶಕಗಳ ಕಾಲ ಬದುಕುವ ಮಾನವ ಸಮಾಜಕ್ಕೆ ಒಳ್ಳೆಯದು ನೀಡಿ ಹೋಗುವುದು ಅಪರೂಪ, ಇದೇ ಮಾನವ ಹಾಗೂ ಪುಷ್ಪಕ್ಕೆ ಇರುವ ವ್ಯತ್ಯಾಸ ಎಂದರು. 
೪೦ ಕ್ಕೂ ಹೆಚ್ಚಿನ ಹೂವಿನ ವೈಜ್ಞಾನಿಕ ಹೆಸರು, ಪೌರಾಣಿಕ ಹಿನ್ನೆಲೆ, ವೈಜ್ಞಾನಿಕ ಹಿನ್ನೆಲೆ ಹಾಗೂ ಬಹುಮುಖ್ಯವಾಗಿ ಹೂವಿನಲ್ಲಿರುವ ಔಷಧೀಯ ಗುಣಗಳ ಸಮಗ್ರ ಪರಿಚಯ ಗ್ರಂಥ, ಈ ಗ್ರಂಥ ಆರೋಗ್ಯ ಸುಧಾರಣೆಯ ಕೈಪಿಡಿ ಸಹ ಹೌದು ಎಂದರು‌.
ಧ್ಯಾನಸ್ಥ ಸ್ಥಿತಿಯಲ್ಲಿ ಉತ್ತುಂಗಕ್ಕೆ ಹೋಗುವುದು ಉನ್ನತ ಮಟಕ್ಕೆ ಹೋಗುತ್ತದೆ, ಈ ಕಾರಣಕ್ಕಾಗಿಯೇ ಕವಿಗಳು, ಕಲಾವಿದರು ಧ್ಯಾನಸ್ಥ ರೂಪದಲ್ಲಿ ಕಲಾ ಸೇವೆಯಲ್ಲಿ ತೊಡಗುವುದುಂಟು ಎಂದರು.
ಲೇಖಕಿ ಪ್ರೇಮಾ‌ ಕುಲಕರ್ಣಿ ಮಾತನಾಡಿ, ಪುಷ್ಪ ಪುನರ್ಜನ್ಮದ‌ ಸಂಕೇತ, ಪಾರಿಜಾತ ಸೇರಿದಂತೆ ‌ಅನೇಕ‌ ಪುಷ್ಪಗಳ ಹಿನ್ನೆಲೆಯನ್ನು ವಿವರಿಸಿದರು.
ಸಾನಿಧ್ಯ ವಹಿಸಿದ್ದ ಹುಲ್ಯಾಳ ಗುರುದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ  ಆಶೀರ್ವಚನ ನೀಡಿ, ಹೂಮಾಲೆ ಎನ್ನುವ ಗ್ರಂಥ ಹೂಗಳ ಪರಿಚಯ ಗ್ರಂಥ, ಹೂವುಗಳ ವಿವರಣೆ, ವೈಜ್ಞಾನಿಕ ಹೆಸರು, ಹೂವಿನ ಪ್ರಯೋಜನ, ಹೂವಿನಲ್ಲಿರುವ ಆಯುರ್ವೇದ ಗುಣಗಳನ್ನು ಸಮಗ್ರವಾಗಿ ಪರಿಚಯಿಸಿರುವ ಈ ಗ್ರಂಥ ಒಂದು ಸಂಶೋಧನಾತ್ಮಕ ಗ್ರಂಥ, ಇನ್ನೂ ಹೆಚ್ಚು ಸಂಶೋಧನೆ ಮಾಡುವ ಮನೋಭಾವ ಬೆಳೆಸುವ ಗ್ರಂಥ ಎಂದರು.
ಹೂವು ನಮ್ಮ ಜೀವನದ ದಾರಿದೀಪ, ಅದು ಸುಂದರವಾಗಿ ಅರಳುತ್ತದೆ, ಸಂಜೆ ಬಾಡುತ್ತದೆ, ಈ ಜೀವನ ತಾತ್ಪರ್ಯದಲ್ಲಿ ಹೂವು ನಮಗೆ ಏಳುವಾಗ ಸುಂದರವಾಗಿ ನಿದ್ದೆಯಿಂದ ಎಚ್ಚರವಾಗಬೇಕು, ಮಲಗುವಾಗ ಜಗತ್ತಿನ ಭಾರ ಕಳೆದು ಮಲಗಬೇಕು ಎಂದು ಹೂವು ನಮಗೆ ಜೀವನ ಪಾಠ ಕಲಿಸುತ್ತದೆ ಎಂದರು.
ಹೂವು ಅನೇಕವಿರಬಹುದು, ಅದು ಅಡಕವಾಗಿದ್ದು ಒಂದೇ ದಾರದಲ್ಲಿ, ಅದೇ ರೀತಿ ಮನುಷ್ಯನಲ್ಲಿ ಭಿನ್ನ ಭಿನ್ನ ಗುಣ ಇರಬಹುದು, ಹೂಮಾಲೆಯ ದಾರದಂತೆ ಮನುಷ್ಯನ ಆತ್ಮಸ್ವರೂಪ ಒಂದೇ ಎಂದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಪುಷ್ಪಗಳೆಂದರೆ ಅಪಾರ ಅಕ್ಕರೆ , ಹೂವುಗಳನ್ನು ನೋಡಿ   ಅಪಾರ ಸಂತೋಷ ಪಡುತ್ತಿದ್ದರು ಎಂದರು.
ಸೌಂದರ್ಯ, ಸುಗಂಧ ಎರಡನ್ನು ಕರುಣಿಸುವ ಪುಷ್ಪಗಳ ಬಗ್ಗೆ ವಿವರಣೆ ಜೊತೆಗೆ ಹೂವುಗಳ ಬೇರಿನಲ್ಲಿರುವ ಔಷಧೀಯ ಗುಣಗಳನ್ನು ಸಹ ಪುಸ್ತಕದಲ್ಲಿ ವಿವರಣೆ ನೀಡಿರುವುದರಿಂದ ಇದು ಪ್ರತಿಯೊಬ್ಬರು ಓದುವ ಗ್ರಂಥ ಎಂದರು. 
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಸಾಹಿತಿಗಳು ನಿರ್ಭೀಡೆಯಿಂದ ತಮ್ಮ ವಿಚಾರಗಳನ್ನು ಸಾಹಿತ್ಯದ ಮೂಲಕ ನೀಡುತ್ತಲೇ ಇದ್ದಾರೆ, ನೂರು ಜನರು ಚಿಂತನೆ ಮಾಡುವುದನ್ನು ಸಾಹಿತಿ ಒಬ್ಬನೇ ಚಿಂತನೆ ಮಾಡುತ್ತಾನೆ ಎಂದರು‌. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೇ ಸಾಹಿತ್ಯದ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು‌.
ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ, ಉದ್ಯಮಿ ಅಣ್ಣಾಸಾಹೇಬ ಪಾಟೀಲ, ಹಿರಿಯ ಪತ್ರಕರ್ತ ಗೋಪಾಲ ನಾಯಕ,  ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಾಂದ ಮಾಸ್ತಿಹೊಳಿ, ಡಾ.ಬಾಬು ರಾಜೇಂದ್ರ ನಾಯಕ, ಸಹಕಾರಿ ಧುರೀಣ ರಮೇಶ ಬಿದನೂರ,ಹಿರಿಯ ಪತ್ರಕರ್ತರಾದ ಅನೀಲ ಹೊಸಮನಿ, ರಫೀ ಭಂಡಾರಿ, ರಾಘವ ಅಣ್ಣಿಗೇರಿ, ಹಿರಿಯ ಲೇಖಕಿ ಇಂದುಮತಿ ಲಮಾಣಿ,  ಸುಶೀಲೇಂದ್ರ ನಾಯಕ, ರಾಜು ಗಚ್ಚಿನಮಠ, ಶ್ರೀದೇವಿ ಉತ್ಲಾಸರ,  ಸುಶೀಲೇಂದ್ರ ನಾಯಕ, ಆನಂದ ಜೋಶಿ,  ಜಗದೀಶ ಬೋಳಸೂರ, ಪ್ರಭು ಮಲ್ಲಿಕಾರ್ಜುನಮಠ, ಶರಣು ಹೀರಾಪೂರ, ರಮೇಶ ಕೋಟ್ಯಾಳ, ಅಭಿಷೇಕ ಚಕ್ರವರ್ತಿ, ಹಿರಿಯ ಪತ್ರಕರ್ತ ಮಧು ಆಶ್ರೀತ್, ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ ಮೊದಲಾದವರು ಉಪಸ್ಥಿತರಿದ್ದರು. 
ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿದರು‌. 
ಪಾಂಡುರಂಗ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ.ಯು.ಎನ್. ಕುಂಟೋಜಿ ಸ್ವಾಗತಿಸಿದರು. ಪ್ರೊ.ಮಲ್ಲಿಕಾರ್ಜುನ ಕನ್ನೂರ ಕಾರ್ಯಕ್ರಮ ನಿರೂಪಿಸಿದರು‌.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ  ಹಿರಿಯ ಪತ್ರಕರ್ತ ದಿ.ಅಚ್ಯುತ್ ಕುಲಕರ್ಣಿ ಸ್ಮರಣೆಯಲ್ಲಿ ದತ್ತಿನಿಧಿ ಸ್ಥಾಪನೆಯ ಚೆಕ್ ನ್ನು ಲೇಖಕಿ ಪ್ರೇಮಾ‌ ಕುಲಕರ್ಣಿ ಕಸಾಪ‌ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅವರಿಗೆ ಸಲ್ಲಿಸಿದರು‌.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment