Saturday, March 1, 2025

ಅಖಂಡ ವಿಜಯಪುರ ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ : ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಅಖಂಡ ವಿಜಯಪುರ ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಾಲ್ಮೀಕಿ ಸಮಾಜ ಸೇವಾ ಸಂಘದವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಬದಲ್ಲಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಕರ್ನಾಟಕ ರಾಜ್ಯದ ಅಖಂಡ ವಿಜಯಪುರ ಜಿಲ್ಲೆಯು (ಬಾಗಲಕೋಟ) ಸೇರಿದಂತೆ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಪ್ರೊ. ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯು ಅತ್ಯಂತ ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಟ್ಟರು ಕೂಡಾ, ಕರ್ನಾಟಕ ಸರ್ಕಾರ ವಿಜಯಪುರ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿರಂತರವಾಗಿ ಅನ್ಯಾಯ ಎಸಗುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಾಡಳಿತ ಕಾಲದಲ್ಲಿ ಹೈದ್ರಾಬಾದ್ ನಿಜಾಮನ ಆಡಳಿತದಲ್ಲಿದ್ದ ವಿಜಯಪುರ ಜಿಲ್ಲೆಯನ್ನು ವಿಶೇಷ ಮೀಸಲಾತಿಯಡಿ ಸೇರಿಸಬೇಕೆಂದು ಜಿಲ್ಲೆಯ ಜನ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಕೂಡ, 371 ಜೆ ಕಲ್ಯಾಣ ಕರ್ನಾಟಕ ವಿಶೇಷ ಮೀಸಲಾತಿ ಸೇರ್ಪಡೆಗೆ ವಿಜಯಪುರ ಜಿಲ್ಲೆಯನ್ನು ಶಿಫಾರಸ್ಸು ಮಾಡದೇ ಕೈಬಿಡುವ ಮೂಲಕ ರಾಜ್ಯ ಸರ್ಕಾರ ಘೋರ ಅನ್ಯಾಯ ಎಸಗಿದೆ. ಇದರಿಂದ ಜಿಲ್ಲೆಯ ಮಕ್ಕಳು ಶೈಕ್ಷಣಿಕ ಮೀಸಲಾತಿ ಹಾಗೂ ಯುವ ಜನತೆಗೆ ಸರ್ಕಾರದ ಉದ್ಯೋಗ ಮೀಸಲಾತಿಯಿಂದ ವಂಚನೆಗೊಳಗಾಗಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬಹುದಿನಗಳಿಂದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಾ ಬಂದಿದ್ದರೂ ಕೂಡಾ, ಇಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದ ರಾಜ್ಯ ಸರ್ಕಾರ ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸದೆ ನಿರಂತರವಾಗಿ ದ್ರೋಹ ಬಗೆಯುತ್ತಾ ಬಂದಿದ್ದಾರೆ. ಇದರಿಂದ ಜಿಲ್ಲೆಯ ಜನರಿಗೆ ಸಿಗಬೇಕಾದ ಆರೋಗ್ಯ ಸೌಲಭ್ಯ ಹಾಗೂ ಜಿಲ್ಲೆಯ ಯುವ ಜನತೆಗೆ ಸಿಗಬೇಕಾದ ವೈದ್ಯಕೀಯ ಶಿಕ್ಷಣದಿಂದ ವಂಚಿತಗೊಳಿಸಲಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆ ನಿರಂತರವಾಗಿ ಬರಗಾಲಪೀಡಿತ ಜಿಲ್ಲೆಯಾಗಿದೆ. ಇಲ್ಲಿನ ಜನ ಉದ್ಯೋಗ ಅರಸಿ ಗೋವಾ- ಮಹಾರಾಷ್ಟ್ರಕ್ಕೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಆಯ್ಕೆವ್ಯ ಯ ಮಂಡನೆಯಲ್ಲಿ ವಿಜಯಪುರ ಜಿಲ್ಲೆಯ ಶಾಶ್ವತ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡದೆ ನಿರಂತರವಾಗಿ ಅನ್ಯಾಯ ಎಸಗುತ್ತಾ ಬಂದಿರುತ್ತಾರೆ. ಸದರಿ ನಮ್ಮ ಅಖಂಡ ವಿಜಯಪುರ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಜಿಲ್ಲೆಗೆ ನ್ಯಾಯ ಒದಗಿಸಲು ವಿಫಲರಾಗಿರುವುದರಿಂದ ಸದರಿ ನಮ್ಮ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸನ್ಮಾನ್ಯರಾದ ತಾವುಗಳು ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾದ ವಿಜಯಪುರ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ರಾಷ್ಟ್ರಪತಿ ಆಡಳಿತ ಹೇರಿ, ಈ ವಿಜಯಪುರ ಪ್ರದೇಶಕ್ಕೆ 371 ಜೆ ಸಮಾಂತರ ಮೀಸಲಾತಿ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಎಲ್ಲ ಈತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment