Tuesday, January 14, 2025

ಬಾಲಮಂದಿರದ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದ ಜಿಲ್ಲಾಧಿಕಾರಿ ಟಿ. ಭೂಬಾಲನ್

 

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಫ್ಜಲಪೂರ ಟಕ್ಕೆಯಲ್ಲಿರುವ ಬಾಲಕರ ಬಾಲ ಮಂದಿರದ ಮಕ್ಕಳೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ ಗಮನ ಸೆಳೆದು ಮಕ್ಕಳಿಗೆ ಹಬ್ಬದ ಶುಭ ಕೋರಿದರು. 

ಹಬ್ಬದ ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ ಜಿಲ್ಲಾಧಿಕಾರಿ ಮಕ್ಕಳೊಂದಿಗೆ ಬೆರೆತು ಹಬ್ಬದ ಶುಭ ಕೋರಿದರು. ಎಲ್ಲ ಮಕ್ಕಳಿಗೂ ಹೊಸ ಬಟ್ಟೆಯ ಉಡುಗೊರೆ ನೀಡಿ, ಸಂಕ್ರಾತಿ ಹಬ್ಬದ ಸಾಂಪ್ರದಾಯಿಕ ಸಿಹಿ ತಿನಿಸುಗಳಾದ ಕಬ್ಬು, ಕುಸರೆಳ್ಳು ಮೊದಲಾದವುಗಳನ್ನು ಸಂತೋಷದಿಂದ ವಿತರಿಸಿ ಹಬ್ಬದ ಶುಭಕೋರಿದ್ದು ವಿಶೇಷವಾಗಿತ್ತು. 


ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನವದೆಹಲಿಯ ಲಾಡಲಿ ಫೌಂಡೇಷನ್ ಪ್ರತಿಷ್ಠಾನದ ಸಹಯೋಗದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.

ಬಾಲಮಂದಿರದ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು,ಓದುವ ವಯಸ್ಸಿನಲ್ಲಿ ಕಷ್ಟಪಟ್ಟು ಓದಿದರೆ ಭವಿಷ್ಯದ ದಾರಿ ಸುಗಮವಾಗುತ್ತದೆ, ನಮ್ಮ ಅಭಿವೃದ್ಧಿಗೆ ನಾವೇ ಶಿಲ್ಪಿಗಳು, ಹಿರಿಯರು ಕೇವಲ ಮಾರ್ಗ ತೋರಬಹುದು, ಆದರೆ ಮಾರ್ಗದಲ್ಲಿ ಸಾಗಬೇಕಾದವರು ನೀವೇ, ಹೀಗಾಗಿ ಚೆನ್ನಾಗಿ ಓದಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. 


ಸಾಧನೆ ಮಾಡಲು ಮನಸ್ಸು ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ, ಧೃಡಮನಸ್ಸು ಮಾಡಿ ಸಾಧನೆಯ ಪಥದಲ್ಲಿ ಮುನ್ನಡೆಯಿರಿ ಎಂದು ಕರೆ ನೀಡಿದರು.

ಬಾಲಮಂದಿರದ ಪ್ರಗತಿಗೆ ಸರ್ವವಿಧದಲ್ಲಿಯೂ ಪ್ರಯತ್ನಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರ ಮುತವರ್ಜಿಯಿಂದ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ೧೦ ಕಡೆ ಓಪನ್ ಜಿಮ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಒಂದು ಓಪನ್ ಜಿಮ್‌ನ್ನು ವಿಜಯಪುರ ಬಾಲಕರ ಬಾಲ ಮಂದಿರದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಸಂತೋಷದ ವಿಷಯವನ್ನು ಸಂಕ್ರಾಂತಿ ಸಂದರ್ಭದಲ್ಲಿ ಮಕ್ಕಳಿಗೆ ತಿಳಿಸಿದರು.

ಇನ್ನೊಂದು ಖುಷಿಯ ಸಂಗತಿಯನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಟಿ. ಭೂಬಾಲನ್, ಅತ್ಯಾಧುನಿಕ ಸೌಕರ್ಯವುಳ್ಳ ನೂತನ ಬಾಲ ಮಂದಿರ ನಿರ್ಮಾಣಗೊಳ್ಳಲಿದ್ದು, ಅದರ ಜೊತೆಗೆ ಬಾಲಕಿಯರ ಬಾಲ ಮಂದಿರ ಸರ್ವತೋಮುಖ ಪ್ರಗತಿಗೆ ೩೦ ಲಕ್ಷ ರೂ. ಅನುದಾನ ಮೀಸಲಿರಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದರು.


ಎಐ ತಂತ್ರಜ್ಞಾನಾಧಾರಿತ ಶೌಚಾಲಯ ನಿರ್ಮಾಣ, ಸ್ವಚ್ಚತೆ ಜಾಗೃತಿಯಲ್ಲಿ ಸಕ್ರೀಯವಾಗಿ ತೊಡಗಸಿಕೊಂಡಿರುವ ಲಾಡಲಿ ಫೌಂಡೇಷನ್ ವಿಜಯಪುರ ಜಿಲ್ಲೆಯನ್ನು ಸೇವಾ ದತ್ತು ಜಿಲ್ಲೆಯಾಗಿ ಸ್ವೀಕರಿಸಿ ಅನೇಕ ಕಾರ್ಯ ಮಾಡುತ್ತಿದೆ, ಬ್ಯಾಗ್, ಲೇಖನ ಸಾಮಗ್ರಿಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಲಾಡಲಿ ಫೌಂಡೇಷನ್ ರಾಷ್ಟಿಯ ಸಲಹೆಗಾರ ಡಾ.ಜಾವೀದ ಜಮಾದಾರ ಮಾತನಾಡಿ, ಬಾಲ ಮಂದಿರ ಮಕ್ಕಳ ಹಿತರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕ ಹಾಗೂ ಸಮಾಜ ಸೇವಾ ಸಂಸ್ಥೆಗಳ ಆದ್ಯ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಬಾಲಮಂದಿರ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪಣವನ್ನು ಸ್ವೀಕರಿಸೋಣ ಎಂದರು.


 ಬಡ, ನಿರ್ಗತಿಕ ಮಕ್ಕಳ ಕಲ್ಯಾಣಕ್ಕಾಗಿ ಪ್ರತಿಯೊಬ್ಬರು ಸಹಾಯಹಸ್ತ ಚಾಚುವ ಮನೋಭಾವ ರೂಢಿಸಿಕೊಳ್ಳಬೇಕಿದೆ ಎಂದರು. 

ಮಕ್ಕಳು ಸಹ ಸ್ಪಷ್ಟವಾದ ಗುರಿಯನ್ನು ಹೊಂದಿ ಆ ಗುರಿ ಕ್ರಮಿಸಲು ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು, ಸಾಧನೆಯಿಂದ ತಮ್ಮನ್ನು ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸ್ವತ: ಮಕ್ಕಳ ಜೊತೆ ಹಬ್ಬದ ಸಂಭ್ರಮದಲ್ಲಿ ತೊಡಗಿರುವುದು ಮಕ್ಕಳಿಗೂ ಖುಷಿ ತರಿಸಿದೆ, ಜಿಲ್ಲಾಧಿಕಾರಿಗಳ ನಡೆ ಮಾದರಿಯಾಗಿದೆ ಎಂದರು. 


ಇದೇ ಸಂದರ್ಭದಲ್ಲಿ ಲಾಡಲಿ ಫೌಂಡೇಷನ್ ವತಿಯಿಂದ ಬ್ಯಾಗ್, ಲೇಖನ ಸಾಮಗ್ರಿ ಹಾಗೂ ನೈರ್ಮಲ್ಯ ಕೈಪಿಡಿಗಳನ್ನು ವಿತರಿಸಲಾಯಿತು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಬಾಲಮಂದಿರದ ಅಧೀಕ್ಷಕಿ ಜಯಶ್ರೀ ಪವಾರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸುಮಾ ಚೌಧರಿ, ಕಲಾವತಿ ಉಪಸ್ಥಿತರಿದ್ದರು.

ಮೌನೇಶ ಪೋತದಾರ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment