Friday, September 13, 2024

ʻಅನುವಾದ ಸಂಪದʼ - ವಿಚಾರ ಸಂಕಿರಣ ಮತ್ತು ಕಾರ್ಯಾಗಾರ

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ವಿಜಯಪುರದ ಎ. ಎಸ್. ಪಾಟೀಲ್ ವಾಣಿಜ್ಯ ಕಾಲೇಜಿನಲ್ಲಿ ‘ಉನ್ನತ ಶಿಕ್ಷಣ ಹಂತದಲ್ಲಿ ಭಾರತೀಯ ಭಾಷೆಗಳಲ್ಲಿ ಸಂವಾದದ ಸಂಸ್ಕೃತಿ – ಸಮಕಾಲೀನ ಜಿಜ್ಞಾಸೆ ಮತ್ತು ಪ್ರಯತ್ನಗಳುʼ ಎಂಬ ವಿಷಯದ ಕುರಿತ ಒಂದು ದಿನದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಸಂತೋಷ್‌ ಕಾಮಗೌಡ, ಕೆ.ಎ.ಎಸ್‌ (ಹಿರಿಯ ಶ್ರೇಣಿ), “ಅನುವಾದ ಸಂಪದದ ವೇದಿಕೆ ಕನ್ನಡ ಭಾಷೆಯಲ್ಲಿ ಸಂಪನ್ಮೂಲ ಬಳಸಿಕೊಳ್ಳಲು, ಸೃಷ್ಟಿ ಮಾಡಲು, ಬಹುಸಾಮಾಜಿಕ ನೆಲೆಗಟ್ಟಿನಲ್ಲಿ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆ.” ಎಂದು ಹೇಳಿದರು. 


ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ನಿರ್ದೇಶಕ ಎಸ್.ವಿ,ಮಂಜುನಾಥ್‌, ಅನುವಾದ ಸಂಪದದ ಉದ್ದೇಶ ವಿವರಿಸುತ್ತಾ, “ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿವಿಧ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿ, ವಿವಿಧ ಸನ್ನಿವೇಶಗಳಲ್ಲಿ ಅನ್ವಯಿಸಿ ನೋಡಿ ಅರಿವನ್ನು ಮರುರೂಪಿಸಿಕೊಳ್ಳಲು ಇರುವ ಮುಕ್ತ ಸಂಪನ್ಮೂಲ ಕಣಜವಾಗಿದೆ” ಎಂದರು. 

ಎ ಎಸ್ ಪಾಟೀಲ್ ವಾಣಿಜ್ಯ ಕಾಲೇಜು ಪ್ರಾಂಶುಪಾಲ ಪ್ರೊ. ಬಿ ಎಸ್ ಬೆಳಗಲಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಕನಕಪ್ಪ ಪೂಜಾರ ಉಪಸ್ಥಿತರಿದ್ದರು.

ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲ್ಪಟ್ಟ ಈ ವಿಚಾರ ಗೋಷ್ಠಿ ಮತ್ತು ಕಾರ್ಯಾಗಾರವನ್ನು, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ʻಅನುವಾದ ಸಂಪದʼದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ʻಅನುವಾದ ಸಂಪದʼವು ಇಂಗ್ಲಿಷ್‌ನಿಂದ ಭಾರತೀಯ ಭಾಷೆಗಳಿಗೆ ಅನುವಾದಿಸಲಾದ ಶೈಕ್ಷಣಿಕ ಸಂಪನ್ಮೂಲಗಳ ಉಚಿತ ಹಾಗೂ ಮುಕ್ತ ಡಿಜಿಟಲ್‌ ಕಣಜವಾಗಿದೆ.

ಪರಿಕಲ್ಪನಾತ್ಮಕ ಗ್ರಹಿಕೆಯ ಸಂವರ್ಧನೆʼ 

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ʼ ಪ್ರಾದೇಶಿಕ ಭಾಷೆಗಳಲ್ಲಿನ ಶೈಕ್ಷಣಿಕ ಸಂಪನ್ಮೂಲಗಳ ಮೂಲಕ ಪರಿಕಲ್ಪನಾತ್ಮಕ ಗ್ರಹಿಕೆಯ ಸಂವರ್ಧನೆʼ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಪ್ರೊ. ಆರ್‌ ಅಮೃತವಲ್ಲಿ, ನಿವೃತ್ತ ಪ್ರಾಧ್ಯಾಪಕರು, ಭಾಷಾಶಾಸ್ತ್ರ ಅಧ್ಯಯನ ವಿಭಾಗ, ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್‌, ಇವರು “ಮಕ್ಕಳಿಗೆ ಓದನ್ನು ಕಲಿಸುವ ಮೊದಲು ನಾವು ಹೇಗೆ ಓದುತ್ತಿದ್ದೇವೆ  ಎಂಬುದನ್ನು ಗುರುತಿಸಬೇಕು. ಧ್ವನಿ, ಲಿಪಿಗಳ ಸಮನ್ವಯ, ಧ್ವನ್ಯಂಗಗಳ ಕಾರ್ಯ ಪ್ರಕ್ರಿಯೆಗಳನ್ನು ಮೊದಲು ಅರಿಯಬೇಕು. ಸರಿಗಮ ಜೋಡಿಸಿ ಸಂಗೀತ ಕಲಿತಂತೆ ಅಕ್ಷರ ಅಕ್ಷರ ಜೋಡಿಸಿ ಶಬ್ದ ಓದಬೇಕು. ವಿದೇಶಿ ಭಾಷೆಯಾದ ಇಂಗ್ಲಿಷ್ ಕಲಿಕೆ ಮಕ್ಕಳಿಗೆ ಇಂದು ಕಷ್ಟವಾಗುತ್ತಿದೆ. ಸೀಮಿತ ಚೌಕಟ್ಟಿನಾಚೆ ಬಂದು ಪರಿಚಿತ ಪರಿಸರದಲ್ಲಿ ಏನಿದೆಯೋ ಅದನ್ನು ನೋಡಿ  ನಾವು ಕಲಿಯಬೇಕು. ಇಂಗ್ಲಿಷ್ ಮಾಧ್ಯಮ ಕೇವಲ ಹೆಸರಿಗೆ ಮಾತ್ರ ಇರಬಾರದು. ಕಲಿಕಾ ಪರಿಸರ, ಕಲಿಕೆಯ ಆಯ್ಕೆಯ ಅವಕಾಶಗಳು, ಅನುಭವಾತ್ಮಕ ಅಂಶಗಳ ಮೂಲಕ ಭಾಷಾ ಕಲಿಕೆಯನ್ನು ನಾವು ನೋಡಬೇಕು.” ಎಂದು ಹೇಳಿದರು. ಪ್ರೊ. ಗಣೇಶ್‌ ಯು. ಎಚ್‌., ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರು, ತುಂಗಾ ಕಾಲೇಜು, ತೀರ್ಥಹಳ್ಳಿ, ಇವರು ಮಾತನಾಡಿ, “ಭಾಷಾ ಬೋಧನೆಯಲ್ಲಿ ಸಾಹಿತ್ಯದ ಪಾತ್ರ ಅನನ್ಯವಾದುದು. ಕವಿತೆಯ ಪ್ರಾಸ, ಲಯಗಳು ಮಕ್ಕಳನ್ನು ಸೆಳೆಯುತ್ತವೆ. ಕೇವಲ ಉಪಕರಣಾತ್ಮಕ ರೂಪವಾಗಿ ಮಾತ್ರ ಭಾಷೆಯನ್ನು ನೋಡದೆ ಸೌಂದರ್ಯಾತ್ಮಕವಾಗಿ ನೋಡಲು, ಮೌಲ್ಯ ಪ್ರಜ್ಞೆ ಬೆಳೆಸಲು ಸಾಹಿತ್ಯವು ಭಾಷೆಗೆ ಸಹಾಯ ಮಾಡುತ್ತದೆ” ಎಂದರು. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಆರ್ಟ್ಸ್‌ ಅಂಡ್‌ ಸೈನ್ಸನ್‌ನಲ್ಲಿ ಬೋಧಕರಾಗಿರುವ ಶ್ರೀಕಂಠ ದಾನಿ ಮಾತನಾಡಿ, “ವಿಜ್ಞಾನ ಎಂಬುದು ಬಂಡವಾಳವಲ್ಲ. ಅದೊಂದು ವಿಸ್ಮಯ, ಕೌತುಕ ಎಂಬ ಭಾವನೆಯನ್ನು ಮೊದಲು ಮಕ್ಕಳಲ್ಲಿ ಬೆಳೆಸಬೇಕು. ದೊಡ್ಡ ದೊಡ್ಡ ಆವಿಷ್ಕಾರಗಳ ಜೊತೆಗೆ ಸಣ್ಣ ಸಣ್ಣ ಆವಿಷ್ಕಾರಗಳನ್ನೂ ಮಕ್ಕಳ ಅನುಭವಕ್ಕೆ ತರಬೇಕು. ನೆಲದ ಸೊಗಡಿರುವ ಉದಾಹರಣೆಗಳು ಪಠ್ಯಪುಸ್ತಕದಲ್ಲಿ ಬರಬೇಕು‌. ಯಾವುದನ್ನು ಯಾರಿಗೆ, ಯಾರಿಗೋಸ್ಕರ ಅನುವಾದ ಮಾಡಬೇಕು ಎಂಬ ಔಚಿತ್ಯಪ್ರಜ್ಞೆಯೊಂದಿಗೆ ವಿಜ್ಞಾನದ ಭಾಷೆಯ ಅನುವಾದ ಸರಳವಾಗಿರಬೇಕು” ಎಂದು ಹೇಳಿದರು. ಎಸ್‌. ವಿ. ಮಂಜುನಾಥ್‌, ಸಹ ನಿರ್ದೇಶಕರು, ಕನ್ನಡ ಉಪಕ್ರಮ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಇವರು ವಿಚಾರ ಗೋಷ್ಠಿಯನ್ನು ನಡೆಸಿಕೊಟ್ಟರು.

ಒಂದು ದಿನದ ಈ ಕಾರ್ಯಕ್ರಮವು, ʻಅನುವಾದ ಸಂಪದʼ (https://anuvadasampada.azimpremjiuniversity.edu.in/) ಕಣಜದಲ್ಲಿ ದೊರೆಯುವ ವೈವಿಧ್ಯಮಯ ಸಂಪನ್ಮೂಲಗಳನ್ನು ಶಿಕ್ಷಣ ಕ್ಷೇತ್ರದಲ್ಲಿರುವ ಭಾಗೀದಾರರಿಗೆ ಪರಿಚಯಿಸಿತು. ವಿಚಾರ ಗೋಷಿಠಿಯ ನಂತರ ನಡೆದ ಕಾರ್ಯಾಗಾರದಲ್ಲಿ, ಸುಮಾರು 200 ಶಿಕ್ಷಕರು, ಶಿಕ್ಷಕ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಷಯಗಳಲ್ಲಿ ತಮ್ಮ ವೃತ್ತಿಪರ ಬೆಳವಣಿಗೆ ಮತ್ತು ತರಗತಿ ಕೋಣೆಯ ಅನ್ವಯಕ್ಕಾಗಿ ಪ್ರಸ್ತುತವೆನ್ನಿಸುವ ಸಾಮಗ್ರಿಗಳನ್ನು ಗುರುತಿಸಿಕೊಂಡರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment