Wednesday, June 5, 2024

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಸಿಇಓ ರಿಷಿ ಆನಂದ

ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ ವಿಜಯಪುರ:

ಮಾನವ ಸಂಕುಲದ ಬದುಕುಳಿಯುವಿಕೆಗೆ ಅವಶ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಪರಿಸರ ಒದಗಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಿಷಿ ಆನಂದ ಹೇಳಿದರು.

 ಜಿಲ್ಲಾ ಪಂಚಾಯತ ಹಾಗೂ ಸಮಾಜಿಕ ಅರಣ್ಯ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಆವರಣದಲ್ಲಿ  ಬುಧವಾರ ಹಮ್ಮಿಕೊಳ್ಳಲಾಗಿದ್ದ 

"ವಿಶ್ವ ಪರಿಸರ ದಿನಾಚರಣೆ " ಕಾರ್ಯಕ್ರಮದಲ್ಲಿ  ಗಿಡ ನೆಟ್ಟು, ನೀರುಣಿಸಿ ಅವರು ಮಾತನಾಡಿದರು.

ಪ್ರಕೃತಿ ಸಂಪನ್ಮೂಲವನ್ನು ನಮಗೆ ಅವಶ್ಯಕತೆ ಇದ್ದಷ್ಟು ಮಾತ್ರ ಉಪಯೋಗಿಸೋಣ, ಅವಶ್ಯಕತೆಗಿಂತ ಹೆಚ್ಚು ಉಪಯೋಗ ಮಾಡದೇ ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಸಿಲಿನ ತಾಪಮಾನ ಇರುವುದರಿಂದ ಸಸಿಗಳನ್ನು ನೆಡುವುದು ಹಾಗೂ ಜಲ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಜಲಸಂರಕ್ಷಣೆಗೆ ಅತ್ಯಂತ ಸೂಕ್ತ ವಿಧಾನ “ಮಳೆನೀರು ಕೊಯ್ಲು” ಈ ವಿಧಾನವನ್ನು ನಾವು ಅಳವಡಿಸಿಕೊಂಡು ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.

 ಮಾನವ ಮಾತ್ರ ಪ್ರಕೃತಿಯ ವಿಚಾರದಲ್ಲಿ ನಿರ್ದಯವಾಗಿದ್ದಾನೆ. ಮಾನವರು ನೈಸರ್ಗಿಕ ಸಂಪನ್ಮೂಲವನ್ನು ದಿನೇ ದಿನೇ ಹಾಳುಗೆಡುವುತ್ತಿದ್ದಾರೆ. ಕಾಡುಗಳನ್ನು ಕಡಿದು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಲು ಕಾರಣರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಪರಿಸರ ಹಾನಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ವರ್ಷದ ಬಿಸಿಲಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಪರಿಸರವನ್ನು ರಕ್ಷಿಸುವ ಕಾಯಕದಲ್ಲಿ ಇಂದಿನಿಂದಲೇ ತೊಡಗಬೇಕು ಎಂದು ಕರೆ ನೀಡಿದರು. 

ನಾವು ಪರಿಸರದ ಬಗ್ಗೆ ಜಾಗೃತರಾಗಿದ್ದರೆ ಮಾತ್ರ ಸಾಲದು ಪ್ರಕೃತಿ ನಮಗೆ ಒದಗಿಸುತ್ತಿರುವ ಎಲ್ಲ ಅವಶ್ಯಕತೆಗಳಿಗೂ ನಾವು ಹೆಚ್ಚಿನ ಗೌರವ ಮತ್ತು ಕಾಳಜಿಯನ್ನು ನೀಡಬೇಕಾಗಿದೆ. ಇದರ ಬಗ್ಗೆ ನಾವಷ್ಟೇ ಅಲ್ಲದೇ ಇತರರಿಗೂ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಪರಿಸರವನ್ನು ನಮಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಸಹ ದೊರಕುವಂತೆ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪಕಾರ್ಯದರ್ಶಿ ಬಿ. ಎಸ್. ಮೂಗನೂರಮಠ, ಯೋಜನಾ ನಿರ್ದೇಶಕ ಸಿ. ಆರ್. ಮುಂಡರಗಿ, ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬು ಚವ್ಹಾಣ, ವಲಯ ಅರಣ್ಯಾಧಿಕಾರಿ ಗಿರೀಶ ಹಲಕುಡೆ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ ಅಲ್ಲಾಪೂರ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಹಾಗೂ ಜಿಲ್ಲಾ ಪಂಚಾಯತಿಯ ಹಾಗೂ ಸಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ  ಸಿಬ್ಬಂದಿ ಪ್ರಕಟಿಸಲಾಗುವುದು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment