ವಿಜಯಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕುಟುಂಬದ ಯಜಮಾನಿ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ಮಾಹೆ 2000 ರೂ. ಡಿಬಿಟಿ ಮೂಲಕ ಒದಗಿಸುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ ಆ.30 ರಂದು ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಜುಲೈ 19 ರಿಂದ ನೋಂದಣಿ ಕಾರ್ಯ ಆರಂಭವಾಗಿದೆ. ಅರ್ಜಿಗಳನ್ನು ಆನ್‍ಲೈನ್ ಮೂಲಕ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ. ಜಿಲ್ಲೆಯಲ್ಲಿ 300 ಗ್ರಾಮ ಒನ್ ಕೇಂದ್ರ, ನಗರ ಸ್ಥಳೀಯ ಸಂಸ್ಥೆ ಕೇಂದ್ರಗಳು ಸೇರಿದಂತೆ 41 ಕರ್ನಾಟಕ ಒನ್ ಕೇಂದ್ರಗಳು, 211 ಬಾಪೂಜಿ ಸೇವಾ ಕೇಂದ್ರಗಳು ಒಳಗೊಂಡಂತೆ 552 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಅರ್ಜಿ ಸಲ್ಲಿಸಲು ಅರ್ಜಿದಾರರ ಹಾಗೂ ಅವರ ಪತಿಯ ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಅರ್ಜಿದಾರರ ಬ್ಯಾಂಕ ವಿವರ ಅಗತ್ಯವಾಗಿರುತ್ತವೆ. ಈ ಯೋಜನೆಯಡಿ ನೊಂದಾಯಿಸಲು ಯಾವುದೇ ಶುಲ್ಕವಿರುವುದಿಲ್ಲ ಸಂಪೂರ್ಣ ಉಚಿತವಾಗಿದೆ.
ಜಿಲ್ಲೆಯಲ್ಲಿ ಮಹಿಳೆ ಯಜಮಾನಿಯಾಗಿರುವ 5,20,906 ರೇಷನ್ ಕಾರ್ಡಗಳಿದ್ದು, ಇದರಲ್ಲಿ ಆಗಸ್ಟ್ 20ರವರೆಗೆ 4,24,839 ಫಲಾನುಭವಿಗಳು ಗೃಹ ಲಕ್ಷ್ಮೀ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದು, ಶೇ.82 ರಷ್ಟು ಸಾಧನೆಯಾಗಿದೆ. ಉಳಿದ ಅರ್ಜಿಗಳ ನೊಂದಣಿ ಕಾರ್ಯ ಪ್ರಗತಿಯಲ್ಲಿದೆ.
ಜುಲೈ 30ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗಳು ಭಾಗವಹಿಸಬೇಕೆಂಬ ಸದುದ್ದೇಶ ಹಾಗೂ ಎಲ್ಲ ಫಲಾನುಭವಿಗಳು ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲೆಯ 288 ಸ್ಥಳೀಯ ಸಂಸ್ಥೆಗಳ ವಾರ್ಡಗಳಲ್ಲಿ ಹಾಗೂ 211 ಗ್ರಾಮ ಪಂಚಾಯತ್ ಸೇರಿದಂತೆ ಒಟ್ಟು 499 ಸ್ಥಳಗಳಲ್ಲಿ ಏಕಕಾಲದಲ್ಲಿ ಯಶಸ್ವಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿ ಕಾರ್ಯಕ್ರಮ ಮೇಲ್ವಿಚಾರಣೆಗಾಗಿ ಓರ್ವ ನೊಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಕಾರ್ಯಕ್ರಮ ಸ್ಥಳದಲ್ಲಿ 10/10 ಅಳತೆಯ ಎಲ್‍ಇಡಿ ವ್ಯವಸ್ಥೆ 200 ರಿಂದ 2000 ಫಲಾನುಭವಿಗಳು ಭಾಗವಹಿಸಲು ಆಸನ ವ್ಯವಸ್ಥೆ, ಉಪಹಾರ ನೀರಿನ ವ್ಯವಸ್ಥೆ ಮಾಡಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮವು ನಗರದ ಸ್ಟೇಶನ್ ರಸ್ತೆಯಲ್ಲಿರುವ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರಲ್ಲಿ ಜರುಗಲಿದೆ. ತಾಲೂಕಾ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಮೈಸೂರು ಕಾರ್ಯಕ್ರಮದ ಸ್ಥಳದಿಂದ ಜಿಲ್ಲೆಯ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಸಂವಾದ ನಡೆಸಲು ಅಂತರ್ಜಾಲದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ನಾಡಗೀತೆ, ಮೈಸೂರು ಕಾರ್ಯಕ್ರಮದ ನೇರ ಪ್ರಸಾರ, ಪ್ರತಿಜ್ಞಾ ವಿಧಿ ಬೋಧನೆ, ಮೈಸೂರದಿಂದ ಹಣ ಬಿಡುಗಡೆಯ ಪ್ರಕ್ರಿಯೆ, ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸಂವಾದ ಕಾರ್ಯಕ್ರಮಗಳು ಜರುಗಲಿವೆ. ಈ ಜನಪರ ಯೋಜನೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಫಲಾನುಭವಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
No comments:
Post a Comment