ಜೀವಭಯದೊಳಗೆ ಜೀವನ ತೆವಳುತ್ತಿದೆ, ಸಾಗುತ್ತಿಲ್ಲ!
ಹೊಸತೆನಿಸುತ್ತಿದೆ,
ಹೆಜ್ಜೆ ಹಾಕಲಾಗದೆ.
ಸಂಶಯ, ಹೆಜ್ಜೆ-ಹೆಜ್ಜೆಗೂ ತಾಕಿ,
ಹೆಜ್ಜೆ ಹಿಂಜರಿಯುತ್ತಿದೆ.
ಜೀವಭಯದೊಳಗೆ,
ಜೀವನ ತೆವಳುತಿದೆ, ಸಾಗುತ್ತಿಲ್ಲ!
ಕೈಮುಟ್ಟಿ, ಕಾಲು ತಾಗಿಸಿ,
ಜೋಲಿ ಹೊಡೆದು, ಜೋತುಬಿದ್ದು
ಹತ್ತುತ್ತಿದ್ದ, ಬಸ್ಸು ಓಡುತ್ತಿದೆ.
ಜನ ಮುಟ್ಟುತ್ತಿಲ್ಲ, ಹತ್ತುತ್ತಿಲ್ಲ.
ಬದುಕ ಭಯದೊಳಗೆ,
ಬದುಕು ನಡೆಯುತ್ತಿದೆ, ಓಡುತ್ತಿಲ್ಲ!
ಮನೆ ತೆರೆದಿದೆ,
ಮನ ತೆರೆಯುತ್ತಿಲ್ಲ.
ಕಾಲಿಟ್ಟರೆ, ಮುಖವರಳಿಸಿ,
ನೀರು ಕೊಡುತ್ತಿದ್ದವರು,
ದೂರವಾಗುತ್ತಿದ್ದಾರೆ!
ಉಸಿರಭಯದೊಳಗೆ,
ಉಸಿರು ಉಸಿರುತ್ತಿದೆ, ಮಾತಾಗುತ್ತಿಲ್ಲ !
ಅಂಬರೀಷ ಎಸ್. ಪೂಜಾರಿ.
ಸುಂದರ
ReplyDelete