Monday, October 31, 2022
Saturday, October 29, 2022
ಅ.31ರಂದು ಮತ ಎಣಿಕೆಗೆ ಸಕಲ ಸಿದ್ಧತೆ : 7 ಕೊಠಡಿ-35 ಟೇಬಲ್ಗಳ ವ್ಯವಸ್ಥೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ಈ ದಿವಸ ವಾರ್ತೆ
ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಅಕ್ಟೋಬರ್ 31ರಂದು ನಗರದ ವಿ.ಬಿ.ದರಬಾರ ಹೈಸ್ಕೂಲ್ನಲ್ಲಿ ನಡೆಯಲಿದ್ದು, ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಅಕ್ಟೋಬರ್ 31ರಂದು ಬೆಳಿಗ್ಗೆ 7-30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಆಯಾ ಚುನಾವಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಅಥವಾ ಅವರ ಚುನಾವಣಾ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಯವರೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ತದನಂತರ ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗಿರುವ ಮತಗಳ ಎಣಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮತ ಎಣಿಕೆ ಕಾರ್ಯವು ಒಟ್ಟು 7 ಕೊಠಡಿಗಳಲ್ಲಿ ನಡೆಯಲಿದ್ದು, ಪ್ರತಿ ಕೊಠಡಿಯಲ್ಲಿ ಒಟ್ಟು 5 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ, 35 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ವಾರ್ಡಗೆ ಒಂದು ಟೇಬಲ್ ವ್ಯವಸ್ಥೆ ಮಾಡಿದ್ದು, ಎಲ್ಲ ವಾರ್ಡಗಳ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಿಸಲಾಗುವುದು.
ಮತ ಎಣಿಕೆ ಸುತ್ತು: ವಾರ್ಡ ಸಂಖ್ಯೆ 15ರ ಒಂದು ವಾರ್ಡಗೆ 03 ಸುತ್ತುಗಳು, ವಾರ್ಡ ಸಂ.26ರ ಒಂದು ವಾರ್ಡಗೆ 05 ಸುತ್ತುಗಳು, ವಾರ್ಡ ಸಂ.4,5,6,9 ಹಾಗೂ 17ರ ಐದು ವಾರ್ಡಗಳಿಗೆ 06 ಸುತ್ತುಗಳು, ವಾರ್ಡ ಸಂ.10, 25, 27, 33, 34 ಹಾಗೂ 35ರ ಆರು ವಾರ್ಡಗಳಿಗೆ 07 ಸುತ್ತುಗಳು, ವಾರ್ಡ ಸಂ.01, 12, 24, 32ರ ನಾಲ್ಕು ವಾರ್ಡಗಳಿಗೆ 08 ಸುತ್ತುಗಳು, ವಾರ್ಡ ಸಂ.19, 28, 30 ಹಾಗೂ 31 ರ ನಾಲ್ಕು ವಾರ್ಡಗಳಿಗೆ 09 ಸುತ್ತುಗಳು, ವಾರ್ಡ ಸಂ.02, 03, 13, 16, 23 ಹಾಗೂ 29ರ ಆರು ವಾರ್ಡಗಳಿಗೆ 10 ಸುತ್ತುಗಳು, ವಾರ್ಡ ಸಂ.14 ಹಾಗೂ 20ರ ಎರಡು ವಾರ್ಡಗಳಿಗೆ 11 ಸುತ್ತುಗಳು, ವಾರ್ಡ ಸಂ. 7,8,11,18 ಹಾಗೂ 22ರ ಐದು ವಾರ್ಡಗಳಿಗೆ 12 ಸುತ್ತುಗಳು ಹಾಗೂ ವಾರ್ಡ ಸಂಖ್ಯೆ. 21ರ ಒಂದು ವಾರ್ಡಿಗೆ 13 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆಗೆ 179
ಅಧಿಕಾರಿ-ಸಿಬ್ಬಂದಿ: ಮಹಾನಗರ ಪಾಲಿಕೆಯ 35 ವಾರ್ಡಗಳ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ 35 ಮತ ಎಣಿಕೆ ಮೇಲ್ವಿಚಾರಕರು, 35 ಮತ ಎಣಿಕೆ ಸಹಾಯಕರು, 07 ಮತ ಎಣಿಕೆ ಡಾಟಾ ಎಂಟ್ರಿ ಮೇಲ್ವಿಚಾರಕರು, 07 ಕಂಪ್ಯೂಟರ್ ಆಪರೇಟರ್, 35 ವಿದ್ಯುನ್ಮಾನ ಮತಯಂತ್ರಗಳನ್ನು ಸಾಗಿಸುವ ಸಿಬ್ಬಂದಿಗಳು ಹಾಗೂ ಇತರೆ ಕಾರ್ಯಗಳಿಗಾಗಿ 60 ಜನರು ಸೇರಿದಂತೆ 179 ಜನರನ್ನು ನಿಯೋಜಿಸಲಾಗಿದೆ.
ಪೊಲೀಸ್ ಬಂದೋಬಸ್ತ್: ಮತ ಎಣಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 3 ಡಿವೈಎಸ್ಪಿ, 8 ಸಿಪಿಐ, 32 ಪಿಎಸ್ಐ, 35 ಎಎಸ್ಐ, 76 ಹೆಡ್ ಕಾನ್ಸಟೇಬಲ್, 128 ಪೊಲೀಸ್ ಕಾನ್ಸಟೇಬಲ್, 17 ಮಹಿಳಾ ಪೊಲೀಸ್ ಕಾನ್ಸಟೇಬಲ್, 04 ಐ.ಆರ್.ಬಿ. ಹಾಗೂ 06 ಡಿಎಆರ್ ತುಕಡಿಗಳನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ.
ಮತ ಎಣಿಕೆ ಕೇಂದ್ರ ಪ್ರವೇಶ : ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ರಾಜ್ಯ ಚುನಾವಣಾ ಆಯೋಗದಿಂದ ಅನುಮತಿ ಹೊಂದಿದ ವ್ಯಕ್ತಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಧಿಕೃತ ಪಾಸ್ ಪಡೆದ ಮಾಧ್ಯಮದವರು, ಸ್ಪರ್ಧಿಸಿದ ಅಭ್ಯರ್ಥಿ, ಅವರ ಚುನಾವಣಾ ಏಜೆಂಟರು ಮತ್ತು ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ದಿನದಂದು ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿ-ಸಿಬ್ಬಂದಿಗಳು, ಅಭ್ಯರ್ಥಿ ಹಾಗೂ ಮತ ಎಣಿಕೆ ಏಜೆಂಟರುಗಳ ವಾಹನ ನಿಲುಗಡೆಗೆ ದರಬಾರ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Friday, October 28, 2022
ಗೋಳಗುಮ್ಮಟದ ಆವರಣದಲ್ಲಿ ಕನ್ನಡಾಭಿಮಾನದ ಪ್ರತಿಧ್ವನಿ
ಈ ದಿವಸ ವಾರ್ತೆ
ವಿಜಯಪುರ : ಕನ್ನಡ ನಾಡು, ನುಡಿ ಶ್ರೀಮಂತಿಕೆ ಸಾರುವ ಗೀತೆಗಳು ಗೋಳಗುಮ್ಮಟದ ಆವರಣಲ್ಲಿ ಮೊಳಗಿ ಕನ್ನಡಾಭಿಮಾನ ಅನಾವರಣಗೊಳಿಸಿದವು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 'ಕೋಟಿ ಕಂಠ ಗಾಯನ' 'ನನ್ನ ನಾಡು- ನನ್ನ ಹಾಡು' ಯಶಸ್ವಿಯಾಗಿ ನಡೆಯಿತು.
ಜಿಲ್ಲಾಧಿಕಾರಿ ಸೇರಿದಂತೆ, ವೇದಿಕೆಯ ಅತಿಥಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ನಗರದ ಸಾರ್ವಜನಿಕರು ಕರುನಾಡಿನ ಶ್ರೀಮಂತಿಕೆ ಸಾರುವ ಗೀತೆಗಳನ್ನು ಹಾಡುವ ಮೂಲಕ ಅಭಿಮಾನ ಪ್ರದರ್ಶಿಸಿದರು.
ನಾಡಗೀತೆ ಜಯಭಾರತ ಜನನೀಯ ತನುಜಾತೆ, ಡಿ.ಎಸ್. ಕರ್ಕಿ ವಿರಚಿತ ಹಚ್ಚೇವು ಕನ್ನಡದ ದೀಪ, ಹುಯಿಲಗೋಳ ನಾರಾಯಣರಾವ್ ವಿರಚಿತ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಕುವೆಂಪು ವಿರಚಿತ `ಬಾರಿಸು ಕನ್ನಡ ಡಿಂಡಿಮವ....', ಚೆನ್ನವೀರ ಕಣವಿ ವಿರಚಿತ 'ವಿಶ್ವ ವಿನೂತನ ವಿದ್ಯಾ ಚೇತನ' ಹಂಸಲೇಖ ವಿರಚಿತ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳು ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಮೊಳಗಿದವು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ನಾಡಗೀತೆಯನ್ನು ಹುಯಿಲಗೋಳ ನಾರಾಯಣರಾವ್ ಅವರು ಕರ್ನಾಟಕದ ಏಕೀಕರಣ ಚಳುವಳಿ ಸಂದರ್ಭದಲ್ಲಿ ಈ ಗೀತೆ ಕನ್ನಡ,ನಾಡು-ನುಡಿ ಸಂಸ್ಕೃತಿ, ಭಾಷೆಯ ಐಕ್ಯತೆ ಆಶಯಕ್ಕೆ ಹೊಸ ಹುಮ್ಮಸ್ಸು ಮೂಡಿಸಿತ್ತು.
ನವಂಬರ್ ತಿಂಗಳಲ್ಲಿ ಎಲ್ಲಾ ಜನರ ಮನೆ- ಮನಗಳಲ್ಲಿ ಕನ್ನಡಾಂಬೆಯ ಹಬ್ಬದ ವಾತಾವರಣದ ಕಳೆಗಟ್ಟುತ್ತದೆ ಎಂದರು.
ಕನ್ನಡವು ಸಂಪದ್ಭರಿತ ಭಾಷೆಯಾಗಿದೆ ಅಂತೆಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅಷ್ಟೆ ಅಲ್ಲದೆ, ಈ ಸಮೃದ್ಧ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಸಂದಿದೆ ಎಂದರು.
ಸಾಹಿತ್ಯ ಸಮೃದ್ಧಿಯ ಚೆಲುವ ಕನ್ನಡ ಭಾಷೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಇದರ ಪ್ರಾಚೀನತೆಯನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ನಾವು ಗುರುತಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದಾಸ ಪರಂಪರೆ, ಭಕ್ತಿ ಪರಂಪರೆ ಮತ್ತು ವಚನ ಸಾಹಿತ್ಯವು ಕನ್ನಡವನ್ನು ಶ್ರೀಮಂತಗೊಳಿಸಿದೆ. ದಾಸವರೇಣ್ಯರು, 12ನೇ ಶತಮಾನದ ಶರಣರು ಸಾಹಿತ್ಯ ಕ್ರಾಂತಿಯನ್ನು ಮಾಡುವ ಮೂಲಕ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಇಂತಹ ಶ್ರೀಮಂತ ಸಂಸ್ಕೃತಿಯುಳ್ಳ ಭಾಷೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕು. ನಾಡಿನ ಸಾಹಿತಿಗಳು, ಕವಿಗಳು ತಮ್ಮ ಬರಹ, ಸಾಹಿತ್ಯದ ಮೂಲಕ ಕವನಗಳ ಮೂಲಕ ನಾಡಿನ ವರ್ಣನೆಯನ್ನ ಬಹು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕೃತಿ ಪರಂಪರೆಯು ಸಾಹಿತ್ಯದ ಮೂಲಕ ಹೆಚ್ಚಳವಾಗಿದೆ ಎಂದರು.
ಕನ್ನಡ ನಾಡು ಪವಿತ್ರ ಭಾವವಿದ್ದಂತೆ,
ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಅನಿವಾರ್ಯವಾದರೂ ನಮ್ಮ ಮೊದಲಾದ್ಯತೆ ಕನ್ನಡವೇ ಆಗಿದೆ. ವಿಶೇಷವಾಗಿ ಶಿಕ್ಷಣ ನೀತಿಯು ಮಾತೃಭಾಷೆಗೆ ಒತ್ತು ಕೊಡುತ್ತಿದೆ. ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಮೂಲಕ ಕನ್ನಡ ನಾಡಿನ ಸಂಸ್ಕೃತಿ ಭಾಷೆ ಸಿರಿಯನ್ನು ಹೆಚ್ಚಿಸಿ ಅದು ಪಸರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಈ ದಿಸೆಯಲ್ಲಿ ಹಮ್ಮಿಕೊಂಡು ಆಚರಿಸಲಾಗುತ್ತಿದೆ ಎಂದರು.
ನಾಡು ನುಡಿ, ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಮೂಡಿಸುವ ಗೀತೆಗಳನ್ನು ನಮ್ಮ ನಾಡಿನ ಕವಿಗಳ ರಚಿಸಿದ್ದಾರೆ. ಇವುಗಳನ್ನು ಕೇಳುವ ಹಾಗೂ ಹಾಡುವ ಮೂಲಕ ನಮ್ಮ ಅಭಿಮಾನ ಹೆಚ್ಚಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜೆ. ಲಕ್ಕಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಜಿಲ್ಲೆಯ ಅಧಿಕಾರಿಗಳು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Thursday, October 27, 2022
ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಸರಳತೆ ಮೆರೆದ ದಕ್ಷ ಅಧಿಕಾರಿ, ಡಿಸಿ ದಾನಮ್ಮನವರ
ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯ ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಾಹಾಂತೇಶ ದಾನಮ್ಮನವರ ಮತ್ತು ಅವರ ಪತ್ನಿ ಶ್ರೀಮತಿ ಶ್ವೇತಾ ದಾನಮ್ಮನವರ ಕುಟುಂಬ ಸಮೇತರಾಗಿ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದರಬಾರ ಶಾಲೆಯಲ್ಲಿ ಸ್ಥಾಪಿಲಾಗಿರುವ 219 ರ ಮತಗಟ್ಟೆಗೆ ತೆರಳಿ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಮತದಾನ ಮಹತ್ವ ಸಾರಿದರು.
ಮತದಾನ ಒಂದು ಪವಿತ್ರವಾದ ಕರ್ತವ್ಯ, ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ ಕೂಡಾ. ನಮ್ಮ ಮತ ಪ್ರಗತಿಗೆ ಬರೆಯುವ ಮುನ್ನುಡಿ. ಮತದಾನ ನಮ್ಮೆಲ್ಲರ ಜವಾಬ್ದಾರಿಯೂ ಸಹ ಆಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022 : ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ
ಈ ದಿವಸ ವಾರ್ತೆ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್ ಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ಅಕ್ಟೋಬರ್ 28 ರಂದು ಮತದಾನ ಜರುಗಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಸರ್ಕಾರಿ ಸಂಸ್ಥೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳನ್ನು ಹೊಂದಿರುವ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಸರ್ಕಾರಿ ಸಂಸ್ಥೆಗಳಿಗೆ ಅ.27ರ ಅಪರಾಹ್ನ ಮತ್ತು ಮತದಾನ ದಿನ ಅ.28ರಂದು ರಜೆಯನ್ನು ಘೋಷಿಸಿ,ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.
ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Saturday, October 22, 2022
Thursday, October 20, 2022
ಮತದಾನದ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗಲು ಜಾಗೃತಿ ಮೂಡಿಸಿ: ಪಿ.ಎಸ್.ವಸ್ತ್ರದ
ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಮಾತನಾಡಿರು
ವಿಜಯಪುರ : ೧೮ ರಿಂದ ೨೦ ವಯೋಮಾನದ ನವ ಮತದಾರರು, ಮುಖ್ಯವಾಹಿನಿಯಿಂದ ದೂರವಿರುವ ಅಲೆಮಾರಿ ಜನಾಂಗದವರು, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಲು ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಸಂಬಂಧಿಸಿದ ಘಟಕಗಳು, ಸಂಚಾಲನಾ ಸಮಿತಿ ಮತ್ತು ಕಾರ್ಯಪಡೆಗಳು ಅತ್ಯಗತ್ಯವಾಗಿ ಗಮನಿಸಬೇಕಾದ ಸಂಗತಿಗಳಾದ ಪಟ್ಟಿಯಲ್ಲಿನ ಹೆಸರು, ಸರಿಯಾದ ನಮೂದು, ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮತದಾನದ ದಿನಾಂಕ, ಸಮಯ ಮೊದಲಾದ ವಿವರಗಳ ಬಗ್ಗೆ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮತದಾರರು ಕಡ್ಡಾಯವಾಗಿ ತಮ್ಮ ಎಪಿಕ್ ಚೀಟಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಆಧಾರ್ ಇಲ್ಲದಿದ್ದಲ್ಲಿ ಚುನಾವಣಾ ಆಯೋಗವು ಗುರುತಿಸಿದ ಯಾವುದಾದರೂ ಪೂರಕ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಮತದಾರರಲ್ಲಿ ಸೂಕ್ತ ಜಾಗೃತಿ ಮೂಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
೨೦೨೩ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿ, ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ಇಲಾಖೆ ಅಧಿಕಾರಿಗಳು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ, ಸರ್ಕಾರೇತರ ಸಂಘ-ಸಂಸ್ಥೆಗಳ ಒಕ್ಕೂಟ ಪದಾಧಿಕಾರಿಗಳು, ಎನ್ಸಿಸಿ ಅಧಿಕಾರಿಗಳು, ಜಿಲ್ಲಾ ಅಗ್ರಣೀಯ ಬ್ಯಾಂಕ್ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವೀಪ್ ಚಟುವಟಿಕೆಗಳ ಭಾಗವಾಗಿ ೨೦೨೩ರ ಮಾರ್ಚ್ವರೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ವಾರ್ಷಿಕ ಕ್ರೀಯಾ ಯೋಜನೆ ಸಿದ್ಧಪಡಿಸಿ ಹಂಚಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಅನುದಾನ, ಅನುದಾನ ರಹಿತ ಎಲ್ಲ ಸಂಘ-ಸಂಸ್ಥೆಗಳು ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಮತದಾರರಲ್ಲಿ ಜಾಗೃತಿ-ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಬೇಕು ಎಂದರು.
ಮತದಾರ ಸಹಾಯವಾಣಿ ಸಂಖ್ಯೆ ೧೯೫೦ ಸಂಪರ್ಕಿಸಿ, ಮತದಾರರು ತಮ್ಮ ವಿವರವನ್ನು ಖಚಿತಪಡಿಸಿಕೊಳ್ಳಬೇಕು. ಈ ಸಹಾಯವಾಣಿಯನ್ನು ಸಂಪರ್ಕಿಸಿ ಮತದಾನದ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು, ಮತದಾರರು ತಮ್ಮ ಮತಗಟ್ಟೆ, ಸೇರಿದಂತೆ ಮತದಾರರ ಸಮಸ್ಯೆಗಳ ಕುರಿತು ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದಾಗಿದೆ ಎಂಬುದರ ಕುರಿತಾಗಿಯೂ ಜಾಗೃತಿ ಮೂಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಮಾತನಾಡಿ, ಐಎಲ್ಓಗಳು ಸಹ ಮನೆ-ಮನೆಗೆ
ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು, ಮತದಾನದ ಹಕ್ಕು ಚಲಾಯಿಸಲು ಬೇಕಾಗುವ ದಾಖಲೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮಕ್ಕಳಕಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Wednesday, October 19, 2022
Thursday, October 13, 2022
Wednesday, October 12, 2022
Tuesday, October 11, 2022
Monday, October 10, 2022
Sunday, October 9, 2022
Friday, October 7, 2022
ಮಹಿಳಾ ವಿವಿ: ಎಂಫಿಲ್/ಪಿಎಚ್ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಈ ದಿವಸ ವಾರ್ತೆ
ವಿಜಯಪುರ: ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ 2022-13 ನೇ ಶೈಕ್ಷಣಿಕ ಸಾಲಿನ ಎಂಫಿಲ್ /ಪಿಎಚ್ಡಿ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ, ಇಂಗ್ಲೀಷ್, ಹಿಂದಿ, ಅರ್ಥಶಾಸ್ತç, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ, ಸಮಾಜಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಬಯೋ ಇನ್ಪಾರ್ಮೆಟಿಕ್ಸ್, ಔಷಧೀಯ ರಸಾಯನಶಾಸ್ತç, ಆಹಾರ ಸಂಸ್ಕರಣೆ ಮತ್ತು ಪೋಷಣೆ, ವಿದ್ಯುನ್ಮಾನ, ಭೌತಶಾಸ್ತç, ಗಣಕಯಂತ್ರ ವಿಜ್ಞಾನ, ಶಿಕ್ಷಣ, ವ್ಯವಹಾರ ಅಧ್ಯಯನ, ವಾಣಿಜ್ಯ ಅಧ್ಯಯನ ಮತ್ತು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಷಯಗಳಲ್ಲಿ ಎಂಫಿಲ್ ಮತ್ತು ಪಿಎಚ್ಡಿ ಅಧ್ಯಯನಕ್ಕೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳನ್ನು ಮಹಿಳಾ ವಿಶ್ವವಿದ್ಯಾನಿಲಯದ ವೆಬ್ಸೈಟ್: www.kswu.ac.in ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ವಿವಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Thursday, October 6, 2022
ಶಾಸಕ ಶಿವಾನಂದ ಪಾಟೀಲ ಪರಿವಾರದಿಂದ ಬನ್ನಿವಿನಿಮಯ
ಈ ದಿವಸ ವಾರ್ತೆ
ವಿಜಯಪುರ: ನಗರದ ರಿಂಗ ರಸ್ತೆ ಹತ್ತಿರ ಬಸವನ ಬಾಗೇವಾಡಿ ಶಾಸಕರ ಮನೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಸಾರ್ವಜನಿಕರ ಸಾಲು ಸಾಲು ತಂಡೋಪ, ತಂಡವಾಗಿ ಅದ್ದೂರಿ ದಸರಾ ಹಾಗೂ ವಿಜಯ ದಶಮಿ ಹಬ್ಬದ ನಿಮಿತ್ಯವಾಗಿ, ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಬನ್ನಿವಿನಿಯಮ ಮಾಡಿಕೊಂಡು ಅರ್ಥಪೂರ್ಣ ದಸರಾ ಆಚರಿಸಿದರು.
ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ, ಶಾಸಕರ ಸಹೋದರರಾದ ಶಿವಶರಣ .ಎಸ್. ಪಾಟೀಲ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕಿಯಾದ ಸಂಯುಕ್ತ ಪಾಟೀಲ ಮತ್ತು ಅವರ ಪತಿ ಹಾಗೂ ಸಕಲ ಪಾಟೀಲ ಕುಟುಂಬದ ವತಿಯಿಂದ ಸರ್ವರಿಗೂ ಹಬ್ಬದ ಶುಭಕೋರಿ ಬನ್ನಿ ನೀಡಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.